ಮಹಿಳಾ ಹಾಕಿ: ಜರ್ಮನಿಗೆ ಮಣಿದ ಭಾರತ ವೀಸ್‌ಬಾಡನ್, ಜರ್ಮನಿ: ಭಾರತ ಮಹಿಳಾ ಹಾಕಿ ತಂಡದವರು ಜರ್ಮನಿ ವಿರುದ್ಧ ಮಂಗಳವಾರ ನಡೆದ ಪಂದ್ಯವನ್ನು 1–4 ಗೋಲುಗಳಿಂದ ಸೋತರು. ತಲಾ ಎರಡು ಗೋಲುಗಳನ್ನು ಗಳಿಸಿದ ನಿಕ್ ಲೊರೆನ್ಜ್ (6 ಮತ್ತು 59ನೇ ನಿ.) ಹಾಗೂ ಜೆಟ್ ಫ್ಲೆಶುಟ್ಜ್ (14 ಮತ್ತು 43ನೇ ನಿ.) ಅವರು ಜರ್ಮನಿ ತಂಡದ ಗೆಲುವಿಗೆ ಕಾರಣರಾದರು. ಭಾರತದ ತಂಡದ ಪರ ಯುವ ಆಟಗಾರ್ತಿ ವೈಷ್ಣವಿ ವಿಠಲ್ ಫಾಲ್ಕೆ (29ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಆಕ್ರಮಣಕಾರಿ ಆಟವಾಡಿದ ಜರ್ಮನಿ ತಂಡದವರು ಮೊದಲ ಕ್ವಾರ್ಟರ್‌ನಲ್ಲಿ ಎರಡು ಗೋಲುಗಳನ್ನು ಗಳಿಸಿ ಭಾರತದ ಮೇಲೆ ಒತ್ತಡ ಹೇರಿದರು. ಎರಡನೇ ಕ್ವಾರ್ಟರ್‌ನಲ್ಲಿ ಗೋಲು ಗಳಿಸಿದ ಭಾರತ, ಹಿನ್ನಡೆಯನ್ನು 1–2 ಕ್ಕೆ ತಗ್ಗಿಸಿತು. ಆದರೆ ವಿರಾಮದ ಬಳಿಕ ಮತ್ತೆ ಎರಡು ಗೋಲುಗಳನ್ನು ಗಳಿಸಿದ ಆತಿಥೇಯರು ನಿರಾಯಾಸ ಗೆಲುವು ದಾಖಲಿಸಿದರು. ಕೊನೆಯ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಗೋಲು ಗಳಿಸುವ ಕೆಲವು ಉತ್ತಮ ಅವಕಾಶಗಳು ದೊರೆತರೂ, ಜರ್ಮನಿಯ ಡಿಫೆಂಡರ್‌ಗಳು ಅಡ್ಡಿಯಾದರು. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಮತ್ತೆ ಜರ್ಮನಿ ವಿರುದ್ಧ ಹಣಾಹಣಿ ನಡೆಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.