ಏಷ್ಯನ್‌ ಗೇಮ್ಸ್‌: ಟಿಟಿ ಸಿಂಗಲ್ಸ್‌ ವಿಭಾಗಕ್ಕೆ ಆಯ್ಕೆ ಮಾಡದಕ್ಕೆ ಹರ್ಮಿತ್ ಅಸಮಾಧಾನ ನವದೆಹಲಿ: ಚೀನಾದಲ್ಲಿ ಇದೇ ವರ್ಷ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಆಡುವ ಭಾರತ ಟೇಬಲ್ ಟೆನಿಸ್ ತಂಡದ ಸಿಂಗಲ್ಸ್‌ ವಿಭಾಗಕ್ಕೆ ತಮ್ಮನ್ನು ಆಯ್ಕೆ ಮಾಡದಿರುವ ಕ್ರಮವನ್ನು 'ಅನ್ಯಾಯ’ ಎಂದು ಹರ್ಮಿತ್ ದೇಸಾಯಿ ಟೀಕಿಸಿದ್ದಾರೆ. ಕಳೆದ ಒಂದು ದಶಕದಿಂದ ಹರ್ಮಿತ್ ಅವರು ಭಾರತ ತಂಡವನ್ನು ಪ್ರಮುಖ ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದಾರೆ. ಆದರೆ ಈ ಸಲದ ಏಷ್ಯನ್ ಕ್ರೀಡಾಕೂಟದಲ್ಲಿ ಅವರನ್ನು ಸಿಂಗಲ್ಸ್‌ಗೆ ಪರಿಗಣಿಸಲಾಗಿಲ್ಲ. ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ ತಂಡಗಳಲ್ಲಿ ಅವರಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ಅನುಭವಿ ಆಟಗಾರ ಅಚಂತ ಶರತ್ ಕಮಲ್ ಮತ್ತು ಜಿ. ಸತ್ಯನ್ ಅವರನ್ನು ಆಯ್ಕೆ ಮಾಡಲಾಗಿದೆ. ‘ಈಗ ನಾನು ಮೂರನೇ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಆಡಲಿದ್ದೇನೆ. ದೇಶಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನನ್ನ ಸಾಧನೆಯು ಸಿಂಗಲ್ಸ್‌ನಲ್ಲಿಯೂ ತೃಪ್ತಿಕರವಾಗಿದೆ. ಆದ್ದರಿಂದ ತಂಡ ಮತ್ತು ಡಬಲ್ಸ್‌ ಅಷ್ಟೇ ಅಲ್ಲ; ಸಿಂಗಲ್ಸ್‌ನಲ್ಲಿ ಆಡಲೂ ನಾನು ಅರ್ಹನಾಗಿದ್ದೇನೆ‘ ಎಂದು ಹರ್ಮಿತ್ ಹೇಳಿದರು. 29 ವರ್ಷದ ದೇಸಾಯಿ ಮಂಗಳವಾರ ಪ್ರಕಟವಾದ ಐಟಿಟಿಎಫ್ ರ‍್ಯಾಂಕಿಂಗ್‌ನಲ್ಲಿರುವ ಭಾರತೀಯರ ಪೈಕಿ ಅಗ್ರಸ್ಥಾನ ಪಡೆದಿದ್ದಾರೆ. ಹೋದ ತಿಂಗಳು ಲಾಗೋಸ್‌ನಲ್ಲಿ ನಡೆದಿದ್ದ ಅವರು ಡಬ್ಲ್ಯುಟಿಟಿ ಕಂಟೆಂಡರ್ ಟೂರ್ನಿಯಲ್ಲಿ ಸೆಮಿಫೈನಲ್ ಮತ್ತು ಟ್ಯುನಿಷ್‌ನಲ್ಲಿ ನಡೆದಿದ್ದ ಡಬ್ಲ್ಯುಟಿಟಿಯಲ್ಲಿ ಪ್ರೀಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದರು. ಸದ್ಯ ಅವರು ಒಟ್ಟಾರೆ 64ನೇ ರ‍್ಯಾಂಕ್‌ನಲ್ಲಿದ್ದಾರೆ. ಶರತ್ (69) ಮತ್ತು ಸತ್ಯನ್ (88) ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ಆದರೆ ತಂಡದ ಆಯ್ಕೆ ಪ್ರಕ್ರಿಯೆ ನಡೆದ ಹೊತ್ತಿನಲ್ಲಿ ದೇಸಾಯಿ 71ನೇ ಸ್ಥಾನದಲ್ಲಿದ್ದರು. ಶರತ್ 54 ಹಾಗೂ ಸತ್ಯ‌ನ್ 88ನೇ ಸ್ಥಾನದಲ್ಲಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.