ಮಳೆಯಿಂದ ಕದಡಿದ ಸೆನ್ ನದಿ ನೀರು: ಗುಣಮಟ್ಟ ಈಜಿಗೆ ಯೋಗ್ಯ: ಪ್ಯಾರಿಸ್‌ ಅಧಿಕಾರಿಗಳು ಪ್ಯಾರಿಸ್‌: ಸೆನ್‌ ನದಿಯ ಒಂದು ಭಾಗದಲ್ಲಿ ಟ್ರಯಥ್ಲಾನ್‌ಗೆ ಭಾನುವಾರ ನಡೆಸಲು ಉದ್ದೇಶಿಸಿದ ತಾಲೀಮನ್ನು ನೀರಿನ ಗುಣಮಟ್ಟದ ಬಗ್ಗೆ ಕಳವಳಗಳು ಎದ್ದ ಕಾರಣ ರದ್ದುಗೊಳಿಸಲಾಯಿತು. ಆದರೆ ಸ್ಪರ್ಧೆಗಳು ನಿಗದಿತ ದಿನ ನಡೆಯುವಷ್ಟರಲ್ಲಿ ಟ್ರಯಥ್ಲೀಟ್‌ಗಳಿಗೆ ಈ ಪ್ರಸಿದ್ಧ ನೀರ್ಗಾಲುವೆಯನ್ನು ಈಜಲು ಸಾಧ್ಯವಾಗಬಹುದೆಂಬ ವಿಶ್ವಾಸವನ್ನು ಅಧಿಕಾರಿಗಳು ಹೊಂದಿದ್ದಾರೆ. ಪುರುಷರ ವಿಭಾಗದ ಟ್ರಯಥ್ಲಾನ್‌ ಮಂಗಳವಾರ ನಡೆಯಬೇಕಿದೆ. ಮಹಿಳೆಯರ ವಿಭಾಗದ ಸ್ಪರ್ಧೆಗಳು ಬುಧವಾರ ನಡೆಯಲಿವೆ. ಈ ಸ್ಪರ್ಧೆಯು ಈಜು (1.5 ಕಿ.ಮಿ), ಸೈಕ್ಲಿಂಗ್ (40 ಕಿ.ಮೀ) ಮತ್ತು ಓಟವನ್ನು (10 ಕಿ.ಮೀ.) ಒಳಗೊಂಡಿದೆ. ಈ ಸ್ಪರ್ಧೆಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಅನುಕೂಲವಾಗಲು ಆಯೋಜಕರು ಅಥ್ಲೀಟುಗಳಿಗೆ ಈಜಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ‘ವಿಶ್ವ ಟ್ರಯಥ್ಲಾನ್‌’ ಪ್ರತಿನಿಧಿಗಳು, ನಗರಾಡಳಿತ ಮತ್ತು ಪ್ರಾದೇಶಿಕ ಅಧಿಕಾರಿಗಳು ನೀರಿನ ಗುಣಮಟ್ಟದ ಪರೀಕ್ಷೆಗಳ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ ಬಳಿಕ, ಅಭ್ಯಾಸದ ಈಜು ಚರಣವನ್ನು ಕೈಬಿಡುವುದಾಗಿ ಆಯೋಜಕರು ತಿಳಿಸಿದರು. ಸೆನ್‌ ನದಿಯ ನೀರಿನ ಗುಣಮಟ್ಟವು ಹವೆಯ ಜೊತೆ ನಿಕಟ ಸಂಬಂಧ ಹೊಂದಿದೆ. ಉದ್ಘಾಟನೆಯ ದಿನ ಮತ್ತು ಮರುದಿನ ಆದ ಮಳೆಯಾಗಿದ್ದು, ಈಜು ಅಭ್ಯಾಸದ ಅಧಿವೇಶವನ್ನು ರದ್ದುಗೊಳಿಸಲಾಯಿತು. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದೆ ಮಳೆಯಾಗುವ ಸಾಧ್ಯತೆ ಇಲ್ಲದಿರುವ ಕಾರಣ, ಅಥ್ಲೀಟುಗಳಿಗೆ ಸನ್‌ ನದಿಯಲ್ಲಿ ಈಜುವ ಅಪೂರ್ವ ಅನುಭವ ದೊರೆಯಲಿದೆ ಎಂದು ನಿರೀಕ್ಷಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಮಳೆಯಾದ ಕೆಲವೇ ದಿನಗಳ ನಂತರ– 24 ರಿಂದ 48 ಗಂಟೆಗಳ ಅಂತರದಲ್ಲಿ ನದಿಯ ನೀರಿನ ಗುಣಮಟ್ಟ ಸಹಜಸ್ಥಿತಿಗೆ ಮರಳಿತ್ತು. ಇದೇ ವೇಳೆ, ಸ್ಪರ್ಧೆಗಳ ವೇಳೆಗೆ ನದಿಯ ನೀರು ಸ್ವಚ್ಛಗೊಳ್ಳುವ ನಿರೀಕ್ಷೆಯಿದೆ ಎಂಬ ವಿಶ್ವಾಸವನ್ನು ಟ್ರಯಥ್ಲೀಟುಗಳು ಹೊಂದಿದ್ದಾರೆ. ಒಲಿಂಪಿಕ್ಸ್‌ಗಾಗಿ ನದಿಯನ್ನು ಸಜ್ಜುಗೊಳಿಸಲು ಪ್ಯಾರಿಸ್‌ ಆಡಳಿತ ₹1,274 ಕೋಟಿ ವೆಚ್ಚ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.