ಕುಸ್ತಿ ಫೆಡರೇಷನ್‌ ಚುನಾವಣೆ ಆ. 12ಕ್ಕೆ ನವದೆಹಲಿ (ಪಿಟಿಐ): ಈಗಾಗಲೇ ಸಾಕಷ್ಟು ಬಾರಿ ಮುಂದಕ್ಕೆ ಹೋಗಿರುವ, ಭಾರತ ಕುಸ್ತಿ ಫೆಡರೇಷನ್‌ನ ಚುನಾವಣೆಯನ್ನು ಆಗಸ್ಟ್‌ 12ರಂದು ನಡೆಸಲಾಗುವುದು ಎಂದು ಶುಕ್ರವಾರ ಪ್ರಕಟಿಸಲಾಗಿದೆ. ಮಹಾರಾಷ್ಟ್ರ ಘಟಕವನ್ನು ಚುನಾವಣಾ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗಿದೆ. ಮಹಾರಾಷ್ಟ್ರದ ಘಟಕದ ಎರಡೂ ಬಣಗಳು ಈ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅರ್ನಹವಾಗಿವೆ ಎಂದು ಚುನಾವಣಾಧಿಕಾರಿ ಆಗಿರುವ ನ್ಯಾ.ಎಂ.ಎಂ.ಕುಮಾರ್‌ ತಿಳಿಸಿದರು. ನಿಗದಿಯಂತೆ ಚುನಾವಣೆ ಜುಲೈ 6ರಂದು ನಡೆಯಬೇಕಿತ್ತು. ಆದರೆ ಫೆಡರೇಷನ್‌ ತಮ್ಮ ಮಾನ್ಯತೆ ತೆಗೆದುಹಾಕಿದ್ದು ಸರಿಯಲ್ಲ ಎಂದು ಮಹಾರಾಷ್ಟ್ರ, ಹರಿಯಾಣ, ತೆಲಂಗಾಣ, ರಾಜಸ್ತಾನ ಮತ್ತು ಹಿಮಾಚಲ ಪ್ರದೇಶ ಘಟಕಗಳು ಅಹವಾಲು ಮಂಡಿಸಿದ ಕಾರಣ ಜುಲೈ 11ಕ್ಕೆ ಮುಂದೆ ಹೋಗಿತ್ತು. ಅಹವಾಲು ಆಲಿಕೆಯೂ ನಡೆಯಿತು. ಇದರ ನಡುವೆ, ಅಸ್ಸಾಂ ಕುಸ್ತಿ ಸಂಸ್ಥೆ ತನಗೆ ಚುನಾವಣೆಯಲ್ಲಿ ಮತದ ಹಕ್ಕು ನೀಡಬೇಕೆಂದು ಗುವಾಹಟಿ ಹೈಕೋರ್ಟ್‌ ಮೊರೆ ಹೋಗಿತ್ತು. ಕೋರ್ಟ್‌ ತಡೆ ನೀಡಿದ ಕಾರಣ ಚುನಾವಣೆ ನಿಗದಿ ದಿನದಂದು ನಡೆಯಲಿಲ್ಲ. ಕಳೆದ ಮಂಗಳವಾರ ಸುಪ್ರೀಂ ಕೋರ್ಟ್‌, ಗುವಾಹಟಿ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿತ್ತು. 24 ರಾಜ್ಯ ಘಟಕಗಳ 48 ಸದಸ್ಯರು ಮತದಾನದಲ್ಲಿ ಭಾಗಿಯಾಗಲಿದ್ದಾರೆ. ಆಗಸ್ಟ್‌ 1ರಂದು ಹುದ್ದೆಗಳಿಗೆ ನಾಮಪತ್ರ ಸಲ್ಲಿಸಬೇಕು. ಆ. 2ರಂದು ಪರಿಶೀಲನೆ ನಡೆಯಲಿದೆ. ಕಣದಲ್ಲಿರುವವರ ಅಂತಿಮ ಪಟ್ಟಿ ಆ. 7ರಂದು ಪ್ರಕಟವಾಗಲಿದೆ. ಅಗತ್ಯವಾದಲ್ಲಿ ಆ. 12ರಂದು ಮತದಾನ ನಡೆಯಲಿದೆ. ಈಗ ಇತ್ಯರ್ಥಗೊಳಿಸಲಾಗಿರುವ ರಾಜ್ಯ ಘಟಕಗಳ ಮಾನ್ಯತೆ ವಿಷಯದಲ್ಲಿ ಫೆಡರೇಷನ್‌ನ ಈ ಹಿಂದಿನ ಆಡಳಿತದ ಕೈ ಮೇಲಾಗಿದೆ. ಮಹಾರಾಷ್ಟ್ರದಲ್ಲಿ ಕಲಹದಲ್ಲಿ ತೊಡಗಿರುವ ಶರದ್‌ ಪವಾರ್‌ ಬಣ ಮತ್ತು ರಾಮದಾಸ ತಡಸ್ ಬಣಕ್ಕೆ ಚುನಾವಣೆಗೆ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲು ಅನರ್ಹಗೊಳಿಸಲಾಗಿದೆ ಎಂದು ನ್ಯಾ.ಕುಮಾರ್ ಘೋಷಿಸಿದ್ದಾರೆ. ಹರಿಯಾಣದಲ್ಲಿ ರೊಹ್ತಾಶ್ ಸಿಂಗ್ ಮತ್ತು ರಾಕೇಶ್ ಸಿಂಗ್‌ (ಕ್ರಮವಾಗಿ) ಅಧ್ಯಕ್ಷ, ಕಾರ್ಯದರ್ಶಿಯಾಗಿರುವ ಬಣಕ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಈ ಬಣ ಬ್ರಿಜ್‌ಭೂಷಣ್ ಅವರಿಗೆ ನಿಷ್ಠವಾಗಿದೆ. ಕಾಂಗ್ರೆಸ್‌ ನಾಯಕ ದೀಪೆಂದರ್ ಸಿಂಗ್ ಹೂಡಾ ಬಣದ ವಾದವನ್ನು ತಿರಸ್ಕರಿಸಲಾಗಿದೆ. ತೆಲಂಗಾಣದಲ್ಲಿ ಹಮ್ಜಾ ಬಿನ್‌ ಒಮರ್ ಮತ್ತು ಕೆ.ನರಸಿಂಗ ರಾವ್ ಬಣಕ್ಕೆ ಅವಕಾಶ ನೀಡಲಾಗಿದೆ. ಈ ಬಣವು ಬ್ರಿಜ್ ಭೂಷಣ್ ಅವರಿಗೆ ಆಪ್ತವಾಗಿದೆ. ಹಿಮಾಚಲಪ್ರದೇಶದಲ್ಲಿ ಎರಡೂ ಬಣಗಳ ಮಧ್ಯೆ ಸಂಧಾನವಾಗಿದ್ದು, ಒಬ್ಬೊಬ್ಬ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ. ರಾಜಸ್ಥಾನದಲ್ಲಿ ಉಮೇದ್ ಸಿಂಗ್ ಮತ್ತು ನಾನು ಸಿಂಗ್ ಬಣಕ್ಕೆ (ಕ್ರಮವಾಗಿ ಅಧ್ಯಕ್ಷ ಮತ್ತು ಕಾರ್ಯದರ್ಶಿ) ಅವಕಾಶ ನೀಡಲಾಗಿದೆ. ಪ್ರೇಮ್‌ ಲೋಚಬ್ ಬಣದ ವಾದ ತಳ್ಳಿಹಾಕಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.