ಏಷ್ಯನ್‌ ಗೇಮ್ಸ್‌ ಆಯ್ಕೆ ಟ್ರಯಲ್ಸ್‌: ಮಧ್ಯಪ್ರವೇಶಕ್ಕೆ ದೆಹಲಿ ಹೈಕೋರ್ಟ್ ನಕಾರ ನವದೆಹಲಿ: ಪ್ರಮುಖ ಕುಸ್ತಿಪಟುಗಳಾದ ವಿನೇಶಾ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರಿಗೆ ಏಷ್ಯನ್‌ ಗೇಮ್ಸ್‌ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿ, ನೇರವಾಗಿ ತಂಡಕ್ಕೆ ಆಯ್ಕೆ ಮಾಡಿದ ವಿಷಯದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. ಈ ವಿನಾಯಿತಿಯನ್ನು ಪ್ರಶ್ನಿಸಿ, ವಿಶ್ವ 20 ವರ್ಷದೊಳಗಿನವರ ಮಹಿಳಾ ಚಾಂಪಿಯನ್‌ ಅಂತಿಮ್ ಪಂಘಲ್ ಮತ್ತು 23 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ ಸುಜೀತ್‌ ಕಲ್ಕಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್‌ ಅವರು ವಜಾಗೊಳಿಸಿ ಶನಿವಾರ ಆದೇಶಿಸಿದರು. ವಿನೇಶಾ ಮತ್ತು ಬಜರಂಗ್ ಅವರಿಗೆ ಟ್ರಯಲ್ಸ್‌ ಇಲ್ಲದೇ ಏಷ್ಯನ್‌ ಗೇಮ್ಸ್‌ ಕುಸ್ತಿ ತಂಡಕ್ಕೆ ನೇರಪ್ರವೇಶ ನೀಡಿರುವುದಾಗಿ ಭಾರತ ಒಲಿಂಪಿಕ್‌ ಸಮಿತಿಯ ಅಡ್‌ಹಾಕ್‌ ಸಮಿತಿ ಜುಲೈ 18ರಂದು ತಿಳಿಸಿದ್ದು, ಇದರ ವಿರುದ್ಧ ಜೂನಿಯರ್‌ ಕುಸ್ತಿಪಟುಗಳು, ತರಬೇತುದಾರರ ವಲಯದಿಂದ ಅಸಮಾಧಾನಗಳು ಕೇಳಿಬಂದಿದ್ದವು. ಜುಲೈ 19ರಂದು ಅಂತಿಮ್‌ ಮತ್ತು ಸುಜೀತ್‌ ದೆಹಲಿ ಹೈಕೋರ್ಟ್‌ ಮೊರೆಹೋಗಿದ್ದರು. ಏಷ್ಯನ್‌ ಗೇಮ್ಸ್‌ಗೆ ಭಾರತ ತಂಡದ ಆಯ್ಕೆಗೆ ಇದೇ 22 ಮತ್ತು 23ರಂದು ಟ್ರಯಲ್ಸ್‌ ನಿಗದಿ ಆಗಿದೆ. ಬಜರಂಗ್‌ 65 ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಮತ್ತು ವಿನೇಶಾ ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.