ಸುಪ್ರೀಂ ಕೋರ್ಟ್‌ ಮೊರೆಹೋಗುವೆ: ಅಂತಿಮ್ ನವದೆಹಲಿ: ಹೈಕೋರ್ಟ್‌ ಶನಿವಾರ ತಮ್ಮ ಅರ್ಜಿಯನ್ನು ವಜಾಗೊಳಿಸಿದ ಆದೇಶ ಬರುವ ಸ್ವಲ್ಪ ಮೊದಲು, ಪ್ರತಿಭಾನ್ವಿತೆ ಅಂತಿಮ್‌ ಪಂಘಲ್ ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಜಯಗಳಿಸಿದರು. ಇನ್ನೊಂದೆಡೆ, ಇಬ್ಬರು ವಿಶ್ವ ಚಾಂಪಿಯನ್‌ಷಿಪ್‌ ಪದಕ ವಿಜೇತರಿದ್ದ 57 ಕೆ.ಜಿ. ವಿಭಾಗದಲ್ಲಿ ಮಾನಸಿ ಅಹ್ಲಾವತ್‌ ಎಲ್ಲರ ನಿರೀಕ್ಷೆ ಮೀರಿ ಏಷ್ಯನ್ ಗೇಮ್ಸ್‌ ತಂಡಕ್ಕೆ ಆಯ್ಕೆಯದರು. 53 ಕೆ.ಜಿ. ವಿಭಾಗದಲ್ಲಿ 19 ವರ್ಷದ ಪಂಘಲ್‌, ಟ್ರಯಲ್ಸ್‌ನ ತಮ್ಮ ಎಲ್ಲ ಸ್ಪರ್ಧೆಗಳನ್ನು ಕಷ್ಟವಿಲ್ಲದೇ ಜಯಿಸಿದರು. ಫೈನಲ್‌ನಲ್ಲಿ ಮಂಜು ವಿರುದ್ಧ ಕೇವಲ ಎರಡು ನಿಮಿಷಗಳಲ್ಲಿ ಜಯಗಳಿಸಿದರು. ಆದರೆ ಈ ವಿಭಾಗದಲ್ಲಿ ವಿನೇಶಾ ಫೋಗಟ್‌ ಈಗಾಗಲೇ ಭಾರತ ತಂಡಕ್ಕೆ ಆಯ್ಕೆ ಆಗಿದ್ದಾರೆ. ‘ಸುಪ್ರೀಂ’ಗೆ ಮೊರೆ: ‘ನಾನು ಟ್ರಯಲ್ಸ್‌ನಲ್ಲಿ ನ್ಯಾಯೋಚಿತವಾಗಿ ಜಯಗಳಿಸಿದ್ದೇನೆ. ಗೆದ್ದರೂ ನಾನ್ಯಾಕೆ ಸ್ಟ್ಯಾಂಡ್‌ಬೈ ಆಗಿರಬೇಕು. 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸದವರು ಸ್ಟ್ಯಾಂಡ್‌ ಬೈ ಆಗಬೇಕು. ನನ್ನ ಅರ್ಜಿ ವಜಾ ಆಗಿದೆ. ಆದರೆ ಹೋರಾಟ ಇಲ್ಲಿಗೇ ಕೈಬಿಡುವುದಿಲ್ಲ. ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವೆ’ ಎಂದು ಅಂತಿಮ್ ಸುದ್ದಿಗಾರರಿಗೆ ತಿಳಿಸಿದರು. ‘ಹೀಗೆಯೇ ಅಕೆ (ವಿನೇಶಾ) ನೇರ ಪ್ರವೇಶ ತೆಗೆದುಕೊಂಡರೆ, ನಾವು ಎಷ್ಟು ಸಮರ್ಥರಿದ್ದೇವೆ ಎಂದು ತಿಳಿದುಕೊಳ್ಳುವುದಾದರೂ ಹೇಗೆ? ನಾವು ಪ್ರಯತ್ನ ಬಿಡುವುದಿಲ್ಲ. ಮುಂದೇನು ಮಾಡಬೇಕೆಂದು ನನ್ನ ಕೋಚ್‌ ನಿರ್ಧರಿಸುತ್ತಾರೆ’ ಎಂದರು. 57 ಕೆ.ಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತೆ ಅನ್ಶು ಮಲಿಕ್ ಮತ್ತು ಕಂಚಿನ ಪದಕ ವಿಜೇತೆ ಸರಿತಾ ಮೊರ್‌ ಮೊದಲ ಸುತ್ತಿನಲ್ಲೇ ಎದುರಾಗಿದ್ದರು. ಫೈನಲ್‌ಗೆ ಮೊದಲೇ ಫೈನಲ್‌ನಂತಿದ್ದ ಈ ಪಂದ್ಯ ತೀವ್ರ ಹೋರಾಟ ಕಂಡು ಸರಿತಾ ಮೋರ್‌ 5–4ರಲ್ಲಿ ಪ್ರಯಾಸದ ಜಯಗಳಿಸಿದರು. ಆದರೆ ಸರಿತಾ ಮುಂದಿನ ಸುತ್ತಿನಲ್ಲಿ ಮಾನಸಿ ಎದುರು 6–9ರಲ್ಲಿ ಸೋತರು. ಮಾನಸಿ ಫೈನಲ್‌ನಲ್ಲೂ ಜಯಶಾಲಿಯಾದರು. 62 ಕೆ.ಜಿ ವಿಭಾಗದಲ್ಲಿ ಸೋನಮ್ ಮಲಿಕ್‌, 50 ಕೆ.ಜಿ ವಿಭಾಗದಲ್ಲಿ ಪೂಜಾ ಗೆಹಲೋತ್‌ ಅರ್ಹತೆ ಪಡೆದರು. 68 ಕೆ.ಜಿ. ವಿಭಾಗದಲ್ಲಿ ರಾಧಿಕಾ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದರು. 68 ಕೆ.ಜಿ.ಬದಲು 76 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ದಿವ್ಯಾ ಕಕ್ರಾನ್‌ ಸೋಲನುಭವಿಸಿದರು. ಈ ವಿಭಾಗದಲ್ಲಿ ಅನುಭವಿ ಕಿರಣ್ ಜಯಗಳಿಸಿದರು. ಗ್ರೀಕೊ ರೋಮನ್‌ ವಿಭಾಗದಲ್ಲಿ ಗ್ಯಾನೆಂದರ್‌ (60 ಕೆ.ಜಿ), ನೀರಜ್‌ (67 ಕೆ.ಜಿ), ವಿಕಾಶ್ (77 ಕೆ.ಜಿ), ಸುನೀಲ್‌ ಕುಮಾರ್‌ (87 ಕೆ.ಜಿ), ನರಿಂದರ್ ಚೀಮಾ (97 ಕೆ.ಜಿ) ಮತ್ತು ನವೀನ್ (130 ಕೆ.ಜಿ) ಅವರು ತಮ್ಮ ತೂಕ ವಿಭಾಗದಲ್ಲಿ ಮೇಲುಗೈ ಸಾಧಿಸಿ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.