ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ- ಲಲಿತ್‌ ಸೇರಿ ಐವರು ಫಾರ್ವರ್ಡ್‌ಗಳಿಗೆ ಕೊಕ್‌ ನವದೆಹಲಿ: ಮುಂದಿನ ತಿಂಗಳು ಚೆನ್ನೈನಲ್ಲಿ ನಡೆಯಲಿರುವ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಲಲಿತ್‌ ಕುಮಾರ್‌ ಉಪಾಧ್ಯಾಯ ಸೇರಿ ಐವರು ಫಾರ್ವರ್ಡ್‌ ಆಟಗಾರರನ್ನು ಕೈಬಿಡಲಾಗಿದೆ. ಲಲಿತ್‌ ಜೊತೆಗೆ ಅಭಿಷೇಕ್‌, ಪವನ್‌, ದಿಲ್‌ಪ್ರೀತ್‌ ಸಿಂಗ್ ಮತ್ತು ಸಿಮ್ರನ್‌ಜೀತ್‌ ಸಿಂಗ್‌ ಅವರಿಗೂ ಕೊಕ್‌ ನೀಡಲಾಗಿದೆ. ಈ ಎಲ್ಲರೂ ಈಗ ಸ್ಪೇನ್‌ನಲ್ಲಿ, ಅಲ್ಲಿನ ಹಾಕಿ ಸಂಸ್ಥೆಯ 100ನೇ ವರ್ಷದ ಅಂಗವಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಏಷ್ಯನ್‌ ಚಾಂಪಿಯನ್ಸ್‌ ಟೂರ್ನಿ ಆಗಸ್ಟ್‌ 3 ರಿಂದ 12ರವರೆಗೆ ಚೆನ್ನೈನ ಮೇಯರ್ ರಾಧಾಕೃಷ್ಣನ್‌ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಅನುಭವಿ ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್ ಸಿಂಗ್ ಅವರು ನಾಯಕರಾಗಿ ಮುಂದುವರಿಯಲಿದ್ದು, ಮಿಡ್‌ಫೀಲ್ಡರ್‌ ಹಾರ್ದಿಕ್‌ ಸಿಂಗ್‌ ಉಪನಾಯಕರಾಗಿದ್ದಾರೆ. ಡಿಫೆಂಡರ್ ಆಗಿದ್ದ ಮನ್‌ಪ್ರಿತ್‌ ಸಿಂಗ್‌ ಮಿಡ್‌ಫೀಲ್ಡರ್‌ ಸ್ಥಾನಕ್ಕೆ ಮರಳಲಿದ್ದಾರೆ. ಭಾರತವು ಕೊರಿಯಾ, ಮಲೇಷ್ಯಾ, ಪಾಕಿಸ್ತಾನ, ಜಪಾನ್ ಮತ್ತು ಚೀನಾ ತಂಡವನ್ನು ಗುಂಪು ಹಂತದಲ್ಲಿ ಎದುರಿಸಲಿದೆ. ಈ ಟೂರ್ನಿಯ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಮುನ್ನ ಭಾರತಕ್ಕೆ ಸಿದ್ಧತೆ ನಡೆಸಲು ಅವಕಾಶವಾಗಿದೆ. ಅನುಭವಿ ಪಿ.ಆರ್‌.ನಶ್ರೀಜೇಶ್ ಮತ್ತು ಕೃಷ್ಣ ಬಹಾದ್ದೂರ್‌ ಪಾಠಕ್‌ ಗೋಲ್‌ಕೀಪರ್‌ಗಳಾಗಿದ್ದಾರೆ. ‘ನಾವು ಎಚ್ಚರಿಕೆಯಿಂದ ತಂಡದ ಆಯ್ಕೆ ನಡೆಸಿದ್ದು, ತಂಡವು ಏಷ್ಯನ್ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದೆ’ ಎಂದು ಚೀಫ್‌ ಕೋಚ್‌ ಕ್ರೇಗ್‌ ಫುಲ್ಟನ್‌ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದರು. ತಂಡ ಹೀಗೆ: ಗೋಲ್‌ ಕೀಪರ್ಸ್‌: ಪಿ.ಆರ್‌.ಶ್ರೀಜೇಶ್, ಕೃಷ್ಣ ಬಹಾದ್ದೂರ್‌ ಪಾಠಕ್, ಡಿಫೆಂಡರ್ಸ್‌: ಜರ್ಮನ್‌ಪ್ರೀತ್‌ ಸಿಂಗ್‌, ಸುಮಿತ್‌, ಜುಗರಾಜ್ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ವರುಣ್ ಕುಮಾರ್‌, ಅಮಿತ್ರ ರೋಹಿದಾಸ್‌. ಮಿಡ್‌ಫೀಲ್ಡರ್ಸ್‌: ಹಾರ್ದಿಕ್‌ ಸಿಂಗ್‌ (ಉಪನಾಯಕ), ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್‌, ನೀಲಕಂಠ ಶರ್ಮಾ, ಶಂಷೇರ್‌ ಸಿಂಗ್‌. ಫಾರ್ವರ್ಡ್ಸ್‌: ಆಕಾಶದೀಪ್‌ ಸಿಂಗ್‌, ಮನ್‌ದೀಪ್‌ ಸಿಂಗ್, ಗುರ್ಜತ್‌ ಸಿಂಗ್, ಸುಖಜೀತ್‌ ಸಿಂಗ್‌, ಎಸ್‌.ಕಾರ್ತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.