ಜುಲೈ 30ರಿಂದ ಚೆಸ್‌ ವಿಶ್ವಕಪ್‌: ಯುವ ಆಟಗಾರರಿಗೆ ಮಿಂಚಲು ಅವಕಾಶ ಬಾಕು (ಅಜರ್‌ಬೈಜಾನ್‌): ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿ.ಗುಕೇಶ್‌, ಆರ್‌.ಪ್ರಗ್ನಾನಂದ ಸೇರಿದಂತೆ ಭಾರತದ ಪ್ರತಿಭಾನ್ವಿತ ಯುವ ಆಟಗಾರರ ದಂಡು, ಇಲ್ಲಿ ಜುಲೈ 30 ರಿಂದ ಆಗಸ್ಟ್‌ 24ರವರೆಗೆ ನಡೆಯಲಿರುವ ಚೆಸ್‌ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿದೆ. 2024ರ ಕ್ಯಾಂಡಿಡೇಟ್ಸ್‌ ಅರ್ಹತೆ ಪಡೆಯಲು, ಪುರುಷರ ಮತ್ತು ಮಹಿಳೆಯರ ಈ ಟೂರ್ನಿಯಲ್ಲಿ ಅವಕಾಶ ಇದೆ. ವಿಶ್ವ ಚಾಂಪಿಯನ್‌ಗೆ ಸವಾಲು ಹಾಕುವ ಆಟಗಾರನನ್ನು ಕ್ಯಾಂಡಿಡೇಟ್ಸ್‌ ಟೂರ್ನಿ ನಿರ್ಧರಿಸುತ್ತದೆ. 17 ವರ್ಷ ವಯಸ್ಸಿನ ಗುಕೇಶ್ ಮತ್ತು ಪ್ರಜ್ಞಾನಂದ ಅವರಿಗೆ ಮೊದಲ ಸುತ್ತಿಗೆ ಬೈ ನೀಡಲಾಗಿದೆ. ಗುಕೇಶ್ ಅವರು ಚೆಂಗ್‌ ಬಾಬಿ (ಆಸ್ಟ್ರೇಲಿಯಾ) ಮತ್ತು ಇಸ್ಕಂದ್ರೊವ್ ಮಿಸ್ಟ್ರಾಡಿನ್ (ಅಜರ್‌ಬೈಜಾನ್‌) ನಡುವಣ ವಿಜೇತರನ್ನು ಎದುರಿಸುವರು. ಮೂರನೇ ಸುತ್ತಿನಲ್ಲಿ ಅವರಿಗೆ ಸ್ವದೇಶದ ಎಸ್‌.ಎಲ್‌.ನಾರಾಯಣನ್ ಎದುರಾಗುವ ಸಂಭವ ಇದೆ. ನಾರಾಯಣನ್ ಎರಡೂ ಸುತ್ತುಗಳನ್ನು ಗೆದ್ದರಷ್ಟೇ ಈ ಮುಖಾಮುಖಿ ಆಗಲಿದೆ. ಪ್ರಗ್ನಾನಂದ ಅವರು ಎರಡನೇ ಸುತ್ತಿನಲ್ಲಿ, ಸಾಂಟಿಯಾಗೊ ಯಾಗೊ ಡಿ ಮೌರಾ (ಬ್ರೆಜಿಲ್‌)– ಮ್ಯಾಕ್ಸಿಮ್‌ ಲಗಾರ್ಡೆ (ಫ್ರಾನ್ಸ್‌) ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ವೇಗವಾಗಿ ಸುಧಾರಣೆ ಕಾಣುತ್ತಿರುವ ಅರ್ಜುನ್ ಎರಿಗೈಸಿ,‌ ವಿದಿತ್‌ ಸಂತೋಷ್ ಗುಜರಾತಿ, ನಿಹಾಲ್ ಸರಿನ್, ಬಿ.ಅಧಿಬನ್, ಅಭಿಮನ್ಯ ಪುರಾಣಿಕ್ ಮತ್ತು ಹರ್ಷ ಭರತ್‌ಕೋಟಿ ಕಣದಲ್ಲಿರುವ ಭಾರತೀಯ ಆಟಗಾರರ ಪೈಕಿ ಪ್ರಮುಖರು. ಮಹಿಳೆಯರ ವಿಭಾಗದಲ್ಲಿ ಕೊನೆರು ಹಂಪಿ, ದ್ರೋಣವಲ್ಲಿ ಹಾರಿಕ ಅವರು ಎರಡನೇ ಸುತ್ತಿಗೆ ಬೈ ಪಡೆದಿದ್ದಾರೆ. ಪ್ರಗ್ನಾನಂದ ಸೋದರಿ ಆರ್‌.ವೈಶಾಲಿ, ಮೇರಿ ಆ್ಯನ್‌ ಗೋಮ್ಸ್‌, ಪಿ.ವಿ.ನಂದಿದಾ, ದಿವ್ಯಾ ದೇಶಮುಖ್ ಕೂಡ ಈ ಟೂರ್ನಿಯಲ್ಲಿ ಆಡಲಿದ್ದಾರೆ. ಎರಡೂ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ಆಟಗಾರರು ಚಾಲೆಂಜರ್‌ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯಲಿದ್ದಾರೆ. ಚಾಲೆಂಜರ್ ಟೂರ್ನಿಯು ಕೆನಡಾದ ಟೊರಾಂಟೊದಲ್ಲಿ ಮುಂದಿನ ಏಪ್ರಿಲ್‌ನಲ್ಲಿ ನಡೆಯಲಿದೆ. ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ ಅವರು ವಿಶ್ವಕಪ್‌ ಕಿರೀಟವನ್ನು ಮೊದಲ ಬಾರಿ ಧರಿಸುವ ಯತ್ನದಲ್ಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್‌ ಡಿಂಗ್‌ ಲಿರೆನ್ ಮತ್ತು ಆರನೇ ಕ್ರಮಾಂಕದ ಆಟಗಾರ ಇರಾನ್‌ ಸಂಜಾತ ಫ್ರಾನ್ಸ್‌ನ ಆಟಗಾರ ಅಲಿರೇಜಾ ಫಿರೋಜಾ ಅವರು ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಇಯಾನ್‌ ನಿಪೊಮ್‌ನಿಷಿ, ಫ್ಯಾಬಿಯಾನೊ ಕರುವಾನಾ, ಹಿಕಾರು ನಕಾಮುರಾ, ಅನಿಶ್ ಗಿರಿ, ವೆಸ್ಲಿ ಸೊ, ಮ್ಯಾಕ್ಸಿಮ್ ವಕಿಯರ್ ಲಾಗ್ರೆವ್‌ ಸೇರಿದಂತೆ ಖ್ಯಾತನಾಮ ಆಟಗಾರರು ಕಣದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.