ಅದ್ವೈತ್ ದಾಖಲೆ ಸರಿಗಟ್ಟಿದ ಆರ್ಯನ್ ಫುಕುವೊಕಾ (ಜಪಾನ್‌): ಉದಯೋನ್ಮುಖ ಈಜುಪಟು ಆರ್ಯನ್ ನೆಹ್ರಾ, ವಿಶ್ವ ಈಜು ಚಾಂಪಿಯನ್‌ಷಿಪ್‌ನ 800 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ‘ಭಾರತೀಯ ಈಜುಪಟುವೊಬ್ಬರ ಶ್ರೇಷ್ಠ ಕಾಲಾವಧಿ’ಯನ್ನು ಮಂಗಳವಾರ ಸರಿಗಟ್ಟಿದರು. ಅವರು ಒಟ್ಟಾರೆ 27ನೇ ಸ್ಥಾನ ಪಡೆದರು. ಮಂಗಳವಾರ ನಡೆದ ಹೀಟ್ಸ್‌ನಲ್ಲಿ, 19 ವರ್ಷದ ಆರ್ಯನ್ ಈ ಸ್ಪರ್ಧೆಯನ್ನು 8ನಿ.00.76 ಸೆ.ಗಳಲ್ಲಿ ಮುಗಿಸಿ, ಮಧ್ಯಪ್ರದೇಶದ ಅದ್ವೈತ್‌ ಪಾಗೆ ಅವರ ದಾಖಲೆಯನ್ನು ಸರಿಗಟ್ಟಿದರು. ಜೊತೆಗೆ ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನ ತಮ್ಮ ಹಿಂದಿನ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು (8:01.81) ಉತ್ತಮ ಪಡಿಸಿದರು. ಆದರೆ ಗುಜರಾತ್‌ನ ಸ್ಪರ್ಧಿಗೆ ಫೈನಲ್‌ಗೆ ಅರ್ಹತೆ ಪಡೆಯಲು ಆಗಲಿಲ್ಲ. ಹೀಟ್ಸ್‌ನಲ್ಲಿ ಮೊದಲ ಎಂಟು ಸ್ಥಾನ ಪಡೆದವರು ಮಾತ್ರ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಈಜಿನಲ್ಲಿ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ದಾಖಲಾಗುವ ಶ್ರೇಷ್ಠ ಅವಧಿಯನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಬೇರೆ ಕೂಟಗಳಲ್ಲಿ ಇದಕ್ಕಿಂತ ಉತ್ತಮ ಸಾಧನೆ ದಾಖಲಿಸಿದರೆ, ಅದನ್ನು ‘ಭಾರತೀಯನ ಶ್ರೇಷ್ಠ ಕಾಲಾವಧಿ’ ಎನ್ನಲಾಗುತ್ತದೆ. ಭಾರತದ ಇನ್ನೊಬ್ಬ ಸ್ಪರ್ಧಿ ಸಜನ್ ಪ್ರಕಾಶ್, 200 ಮೀ. ಬಟರ್‌ಫ್ಲೈನಲ್ಲಿ 23ನೇ ಸ್ಥಾನ ಪಡೆದರು. ಅವರು ತೆಗೆದುಕೊಂಡ ಕಾಲ: 1ನಿ.58.07ಸೆ. ಈ ಸ್ಪರ್ಧೆಯಲ್ಲಿ, 29 ವರ್ಷದ ಸಜನ್‌ ಅವರ ವೈಯಕ್ತಿಕ ಶ್ರೇಷ್ಠ ಕಾಲಾವಧಿ: 1ನಿ.56.38 ಸೆ. ಅವರು 50 ಮೀ. ಬಟರ್‌ಫ್ಲೈನಲ್ಲಿ 91 ಈಜುಪಟುಗಳಲ್ಲಿ 57ನೇ ಸ್ಥಾನ ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.