ವಿಶ್ವ ಈಜು ಚಾಂಪಿಯನ್‌ಷಿಪ್‌: ಸೆಮಿಫೈನಲ್‌ ತಲುಪಲು ಶ್ರೀಹರಿ ವಿಫಲ ಫುಕೊವೊಕಾ: ಭಾರತದ ಈಜುತಾರೆ ಶ್ರೀಹರಿ ನಟರಾಜ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯನ್ನು ಸೋಮವಾರ ಈ ಋತುವಿನ ಉತ್ತಮ ಅವಧಿಯೊಳಗೆ ಈಜಿದರೂ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಅದು ಸಾಲಲಿಲ್ಲ. ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲಿರುವ ಶ್ರೀಹರಿ, 55.26 ಸೆ.ಗಳಲ್ಲಿ ಪೂರೈಸಿ ತಮ್ಮ ಹೀಟ್‌ನಲ್ಲಿ ಕೊನೆಯವರಾದರು. 22 ವರ್ಷದ ಕನ್ನಡಿತ ಈಜುಪಟು ಒಟ್ಟಾರೆ 31ನೇ ಸ್ಥಾನ ಪಡೆದರು. ಏಳು ಹೀಟ್ಸ್‌ಗಳಲ್ಲಿ ಮೊದಲ 18 ಸ್ಥಾನ ಪಡೆದ ಈಜು ಸ್ಪರ್ಧಿಗಳು ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಈ ವರ್ಷ ಅವರು ಸಿಂಗಪುರ ರಾಷ್ಟ್ರೀಯ ವಯೋವರ್ಗ ಈಜುಕೂಟದಲ್ಲಿ ಈ ಅಂತರವನ್ನು 55.60 ಸೆ.ಗಳಲ್ಲಿ ಪೂರೈಸಿ ಚಿನ್ನದ ಪದಕ ಪಡೆದಿದ್ದರು. ಮೊನಾಕೊದಲ್ಲಿ ನಡೆದ ಮಾರೆ ನೋಸ್ಟ್ರಮ್‌ ಸ್ವಿಮ್‌ ಟೂರ್‌ನಲ್ಲಿ 55.29 ಸೆ.ಗಳಲ್ಲಿ ಸ್ಪರ್ಧೆ ಮುಗಿಸಿ ಸುಧಾರಿತ ಪ್ರದರ್ಶನ ನೀಡಿದ್ದರು. 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 53.77 ಸೆ. 2021ರಲ್ಲಿ ಈ ಸಾಧನೆ ಮಾಡಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಅವರು 50 ಮೀ. ಮತ್ತು 200 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲೂ ಭಾಗವಹಿಸಲಿದ್ದಾರೆ. ಸಜನ್‌, ಕುಶಾಗ್ರಗೂ ನಿರಾಸೆ: ಎರಡು ಬಾರಿಯ ಒಲಿಂಪಿಯನ್‌ ಸಜನ್‌ ಪ್ರಕಾಶ್ ಮತ್ತು ದೆಹಲಿಯ ಕುಶಾಗ್ರ ರಾವತ್ ಅವರೂ ತಮ್ಮ ಸ್ಪರ್ಧೆಗಳಲ್ಲಿ ಸ್ಫೂರ್ತಿಯುತ ಸಾಧನೆ ತೋರಲಿಲ್ಲ. ಪ್ರಕಾಶ್‌ 50 ಮೀ. ಬಟರ್‌ಫ್ಲೈ ಸ್ಪರ್ಧೆಯನ್ನು 24.93 ಸೆ.ಗಳಲ್ಲಿ ಪೂರ್ಣಗೊಳಿಸಿ, ಕಣದಲ್ಲಿದ್ದ 57ನೇ ಸ್ಥಾನ ಪಡೆದರು. 91 ಮಂದಿ ಈಜುಪಟುಗಳು ಕಣದಲ್ಲಿದ್ದರು. ಮಂಗಳವಾರ ಅವರು ತಮ್ಮ ನೆಚ್ಚಿನ ಸ್ಪರ್ಧೆಯಾದ 200 ಮೀ. ಬಟರ್‌ಫ್ಲೈನಲ್ಲೂ ಭಾಗಿಯಾಗಲಿದ್ದಾರೆ. ಇನ್ನೊಂದೆಡೆ 400 ಮೀ. ಫ್ರೀಸ್ಟೈಲ್‌ನಲ್ಲಿ ಮಾತ್ರ ಭಾಗವಹಿಸಿದ್ದ ರಾವತ್‌ 3 ನಿ.59.03 ಸೆ.ಗಳಲ್ಲಿ ನಿಗದಿ ದೂರ ಕ್ರಮಿಸಿ 35ನೇ ಸ್ಥಾನ ಪಡೆದರು. ಇದು ಈ ತಿಂಗಳ ಆರಂಭದಲ್ಲಿ ಹೈದರಾಬಾದಿನಲ್ಲಿ ನಡೆದಿದ್ದ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಪ್ರದರ್ಶನಕ್ಕಿಂತ (3:55.45) ಕಡಿಮೆ ಎನಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.