ವಿಶ್ವ ಈಜು ಚಾಂಪಿಯನ್‌ಷಿಪ್‌: ಫೆಲ್ಪ್ಸ್‌ ದಾಖಲೆ ಮುರಿದ ಲಿಯೊನ್ ಫುಕುವೋಕಾ, ಜಪಾನ್: ಫ್ರಾನ್ಸ್‌ನ ಲಿಯೊನ್ ಮರ್ಶಾಂಡ್ ಅವರು ಅಮೆರಿಕದ ದಿಗ್ಗಜ ಈಜುಪಟು ಮೈಕ್‌ ಫೆಲ್ಪ್ಸ್‌ ಅವರ ಹೆಸರಿನಲ್ಲಿದ್ದ ಕೊನೆಯ ವಿಶ್ವದಾಖಲೆಯನ್ನು ಮುರಿದರು. ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ 21 ವರ್ಷದ ಲಿಯೊನ್‌, ಭಾನುವಾರ ಪುರುಷರ 400 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ 4 ನಿ. 02.50 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಫೆಲ್ಪ್ಸ್‌ ಅವರು 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ 4 ನಿ.03.84 ಸೆ.ಗಳಲ್ಲಿ ಗುರಿ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಜು ಸ್ಪರ್ಧೆಯಲ್ಲಿ ಸುದೀರ್ಘ ಅವಧಿಯವರೆಗೆ ಮುರಿಯದೇ ಇದ್ದ ದಾಖಲೆ ಇದಾಗಿತ್ತು. ಟಿಟ್ಮಸ್‌ ದಾಖಲೆ: ಆಸ್ಟ್ರೇಲಿಯಾದ ಆರಿಯಾರ್ನ್ ಟಿಟ್ಮಸ್, ಮಹಿಳೆಯರ 400 ಮೀಟರ್ಸ್ ಫ್ರೀಸ್ಟೈಲ್‌ ಈಜಿನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದರು. 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಅವರು ಗುರಿ ಮುಟ್ಟಲು 3ನಿಮಿಷ, 55.38 ಸೆಕೆಂಡುಗಳನ್ನು ತೆಗೆದುಕೊಂಡರು. ನಾಲ್ಕು ತಿಂಗಳುಗಳ ಹಿಂದಷ್ಟೇ ಕೆನಡಾದ ಸಮ್ಮರ್ ಮೆಕ್ಲಂಟೊಷ್ (3ನಿ, 56.08ಸೆ) ನಿರ್ಮಿಸಿದ್ದ ದಾಖಲೆಯನ್ನು ಟಿಟ್ಮಸ್ ಮೀರಿ ನಿಂತರು. ಮೆಕ್ಲಂಟೊಷ್ ಅವರು ಇಲ್ಲಿ ನಾಲ್ಕನೇ ಸ್ಥಾನ (3ನಿ,59.94ಸೆ) ಪಡೆದರು. ಈ ಸ್ಪರ್ಧೆಯಲ್ಲಿ ಅಮೆರಿಕದ ಕೇಟಿ ಲೆಡೆಕಿ (3ನಿ,58.73ಸೆ) ಮತ್ತು ನ್ಯೂಜಿಲೆಂಡ್‌ನ ಎರಿಕಾ ಫೇರ್‌ವೆದರ್ (3ನಿ,59.59ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.