ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಮತ್ತೆರಡು ಚಿನ್ನ ನವದೆಹಲಿ: ಕಮಲ್‌ಜೀತ್‌ ಅವರು ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾರತ ತಂಡ ಮತ್ತೆರಡು ಚಿನ್ನದ ಪದಕ ಗೆಲ್ಲಲು ಕಾರಣರಾದರು. ಸೋಮವಾರ ನಡೆದ ಪುರುಷರ 50 ಮೀ. ಪಿಸ್ತೂಲ್‌ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡ ಅವರು ತಂಡ ವಿಭಾಗದಲ್ಲೂ ಭಾರತ ಚಿನ್ನ ಜಯಿಸಲು ನೆರವಾದರು. ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ಕೂಟಕ್ಕೆ ಸೋಮವಾರ ತೆರೆಬಿತ್ತು. ಭಾರತ ತಂಡವು ಆರು ಚಿನ್ನ, ಆರು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಒಟ್ಟು 17 ಪದಕಗಳೊಂದಿಗೆ ಚೀನಾದ ಬಳಿಕ ಎರಡನೇ ಸ್ಥಾನ ಗಳಿಸಿತು. ಚೀನಾ ತಂಡ 12 ಚಿನ್ನ ಒಳಗೊಂಡಂತೆ 28 ಪದಕಗಳನ್ನು ಗೆದ್ದುಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಕಮಲ್‌ಜೀತ್‌, 600 ರಲ್ಲಿ 544 ಪಾಯಿಂಟ್ಸ್ ಕಲೆಹಾಕಿದರು. ಉಜ್ಬೆಕಿಸ್ತಾನದ ವೆನಿಯಾಮಿನ್ ನಿಕಿತಿನ್‌ (542) ಎರಡನೇ ಸ್ಥಾನ ಪಡೆದರೆ, ಕೊರಿಯಾದ ಕಿಮ್ ತಾಯೆಮಿನ್ (541) ಕಂಚು ಪಡೆದುಕೊಂಡರು. ಕಮಲ್‌ಜೀತ್‌, ಅಂಕಿತ್‌ ತೋಮರ್‌ ಮತ್ತು ಸಂದೀಪ್‌ ಬಿಷ್ಣೊಯ್ ಅವರನ್ನೊಳಗೊಂಡ ಭಾರತ ತಂಡ ಒಟ್ಟು 1,617 ಪಾಯಿಂಟ್ಸ್‌ ಸಂಗ್ರಹಿಸಿ ಚಿನ್ನ ಜಯಿಸಿತು. 1,613 ಪಾಯಿಂಟ್ಸ್‌ಗಳೊಂದಿಗೆ ಉಜ್ಬೆಕಿಸ್ತಾನ ಬೆಳ್ಳಿ ಗೆದ್ದರೆ, ಕೊರಿಯಾ (1,600) ಕಂಚು ತನ್ನದಾಗಿಸಿಕೊಂಡಿತು. ಮಹಿಳೆಯರ 50 ಮೀ. ಪಿಸ್ತೂಲ್‌ ವಿಭಾಗದಲ್ಲಿ ಟಿಯಾನಾ ಅವರು 519 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಜಯಿಸಿದರು. ಚಿನ್ನ ಗೆದ್ದ ಖನಾ ಅಲಿಯೆವಾ ಅವರಿಗಿಂತ (520) ಕೇವಲ ಒಂದು ಪಾಯಿಂಟ್ಸ್‌ನಿಂದ ಹಿಂದೆ ಬಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.