ಭಾರತ ಕುಸ್ತಿ ಫೆಡರೇಷನ್‌ ಚುನಾವಣೆ: 30ಕ್ಕೆ ಸಭೆ ಕರೆದಿರುವ ಬ್ರಿಜ್‌ಭೂಷಣ್ ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನಕ್ಕೆ ಒಂದು ದಿನ ಮೊದಲು ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಸಭೆ ಕರೆದಿದ್ದಾರೆ. ಅವರು ಪದಾಧಿಕಾರಿಗಳಾಗಿ ಸ್ಪರ್ಧಿಸಲಿರುವ ತಮ್ಮ ನಿಷ್ಠ ಗುಂಪಿನ ಅಭ್ಯರ್ಥಿಗಳ ಹೆಸರು ತಿಳಿಸುವ ಸಾಧ್ಯತೆಯಿದೆ. ಬ್ರಿಜ್‌ ಭೂಷಣ್ ಮತ್ತು ಅವರ ಪುತ್ರ ಕರಣ್ ಈ ಬಾರಿ ಕಣದಲ್ಲಿರುವುದಿಲ್ಲ. ಬ್ರಿಜ್‌ ಈಗಾಗಲೇ 12 ವರ್ಷ ಅಧಿಕಾರ ಪೂರೈಸಿರುವ ಕಾರಣ ನಿಯಮದಂತೆ ಸ್ಪರ್ಧಿಸುವಂತಿಲ್ಲ. ಆದರೆ ಬಿಜೆಪಿ ನಾಯಕನ ಅಳಿಯ ವಿಶಾಲ್‌ ಸಿಂಗ್‌ ಅವರು ಬಿಹಾರದ ಪ್ರತಿನಿಧಿಯಾಗಿ ಉನ್ನತ ಹುದ್ದೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಬ್ರಿಜ್‌ಭೂಷಣ್ ಅವರು 30ರಂದು ಸಭೆ ಕರೆದಿರುವುದನ್ನು ಖಚಿತಪಡಿಸಿರುವ ಫೆಡರೇಷನ್‌ನ ನಿರ್ಗಮಿತ ಸಹಾಯಕ ಕಾರ್ಯದರ್ಶಿ ವಿನೋದ್ ತೋಮಾರ್ ಅವರು, ಸಭೆಯ ಸ್ಥಳ ತಿಳಿಸಿಲ್ಲ. ಆಗಸ್ಟ್‌ 12ರಂದು ಚುನಾವಣೆ ನಿಗದಿ ಆಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಜುಲೈ 31. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.