: ಸೆಮಿಫೈನಲ್‌ಗೆ ಲಕ್ಷ್ಯ ಸೇನ್ ಲಗ್ಗೆ, ಸಾತ್ವಿಕ್‌-ಚಿರಾಗ್ ಹೊರಕ್ಕೆ ಟೋಕಿಯೊ: ಜಪಾನ್‌ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರೆ ಲಕ್ಷ್ಯ ಸೇನ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ನಡುವೆ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ ಸೋಲಿನ ಆಘಾತಕ್ಕೊಳಗಾಗಿದ್ದು, ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ. ಶುಕ್ರವಾರ ನಡೆದ ಪುರುಷ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ.13ನೇ ಶ್ರೇಯಾಂಕದ ಲಕ್ಷ್ಯ ಸೇನ್ ಅವರು ಸ್ಥಳೀಯ ಪಟು ಕೊಕಿ ವಟನಾಬೆ ವಿರುದ್ಧ 21-15 21-19ರ ಅಂತರದಲ್ಲಿ ಗೆಲುವು ಸಾಧಿಸಿದರು. 2021ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ 21 ವರ್ಷದ ಸೆನ್, ಇದೇ ತಿಂಗಳಿನಲ್ಲಿ ಕೆನಡಾ ಓಪನ್ ಸೂಪರ್ 500 ಟೂರ್ನಿ ಜಯಿಸಿದ್ದರು. ಮತ್ತೊಂದೆಡೆ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಒಲಿಂಪಿಕ್ ಚಾಂಪಿಯನ್ ಚೈನೀಸ್ ತೈಪೆಯ ಲೀಗ್ ಯಾಂಗ್ ಮತ್ತು ವಾಗ್ ಚಿ-ಲಾನ್ ವಿರುದ್ಧ 15-21 25-23 16-21ರ ಅಂತರದಲ್ಲಿ ಸೋಲು ಅನುಭವಿಸಿತು. ಭಾರತದ ಈ ಜೋಡಿ, ಈ ವರ್ಷ ಕೊರಿಯಾ ಓಪನ್, ಸ್ವಿಸ್‌ ಓಪನ್, ಇಂಡೊನೇಷ್ಯಾ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.