ಚೀನಾ ಕ್ರಮ ವಿರೋಧಿಸಿ ಹಿಂದೆಸರಿದ ವುಶು ತಂಡ ನವದೆಹಲಿ: ಅರುಣಾಚಲ ಪ್ರದೇಶದ ಮೂವರು ವುಶು ಆಟಗಾರ್ತಿಯರಿಗೆ ಚೀನಾ ‘ಸ್ಟೇಪಲ್ಡ್‌ ವೀಸಾ’ ನೀಡಿರುವುದನ್ನು ಪ್ರತಿಭಟಿಸಿ ಭಾರತದ ವುಶು ತಂಡ ವಿಶ್ವ ವಾರ್ಸಿಟಿ ಕ್ರೀಡಾಕೂಟ (ಡಬ್ಲ್ಯುಯುಜಿ) ದಿಂದ ಗುರುವಾರ ಹಿಂದೆ ಸರಿದಿದೆ. ‘ಚೆಂಗ್ಡುವನಲ್ಲಿ ನಡೆಯುವ ಈ ಬಹು ರಾಷ್ಟ್ರಗಳ ಕೂಟದಲ್ಲಿ ಭಾರತದ ವುಶುಪಟುಗಳು ಸ್ಪರ್ಧಿಸಿದಲ್ಲಿ ಏಷ್ಯನ್‌ ಗೇಮ್ಸ್‌ಗೆ ಆಯ್ಕೆ ಆಗಿರುವವರಿಗೆ ಇದು ಪರೀಕ್ಷೆಯಾಗುತಿತ್ತು’ ಎಂದು ಭಾರತ ವುಶು ಫೆಡರೇಷನ್‌ನ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಮಾತನಾಡಿದ ಅವರು, ‘ಭಾರತದ ಕೆಲ ಸ್ಪರ್ಧಿಗಳ ಸಾಧನೆಯ ಮಟ್ಟವನ್ನು ಇಲ್ಲಿ ಅಳೆಯಲು ಫೆಡರೇಷನ್‌ ಉತ್ಸುಕವಾಗಿತ್ತು’ ಎಂದರು. ಭಾರತ ತಂಡದಲ್ಲಿದ್ದ ಎಂಟು ಆಟಗಾರರ ಪೈಕಿ ನಾಲ್ಕು ಮಂದಿ ಹಾಂಗ್ ಝೌ ಏಷ್ಯನ್‌ ಕ್ರೀಡಾಕೂಟಕ್ಕೂ ಆಯ್ಕೆ ಆಗಿದ್ದಾರೆ. ಏಷ್ಯನ್‌ ಕ್ರೀಡಾಕೂಟ ಸೆಪ್ಟೆಂಬರ್‌ 23 ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಎಂಟು ಆಟಗಾರರು ಮತ್ತು ನಾಲ್ಕು ಮಂದಿ ಸಿಬ್ಬಂದಿ ಒಳಗೊಂಡ ಭಾರತ ವುಶು ತಂಡ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಸ್ಟೇಪಲ್ಡ್‌ ವೀಸಾ ನೀಡಿದ ಚೀನಾ ರಾಯಬಾರ ಕಚೇರಿಯ ಕ್ರಮ ‘ಸ್ವೀಕಾರಾರ್ಹವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯೇಮನ್ ವಾಂಗ್ಶೂ, ಒನಿಲು ತೆಗಾ ಮತ್ತು ಮೆಪುಂಗ್ ಲಮ್ಗು ಅವರು ಅರುಣಾಚಲ ಪ್ರದೇಶದ ಸ್ಪರ್ಧಿಗಳು. ‘ಈ ಮೂವರನ್ನು ಬಿಟ್ಟು ಉಳಿದ ಐವರಿಗೆ ಶನಿವಾರ ಆರಂಭವಾಗುವ ಈ ವಾರ್ಸಿಟಿ ಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಬಹುದಿತ್ತು’ ಎಂದು ತರಬೇತುದಾರ ರಾಘವೇಂದ್ರ ಸಿಂಗ್ ಹೇಳಿದರು. ಆದರೆ ಸರ್ಕಾರ ಒಮ್ಮೆ ಬೇಡ ಎಂದ ಮೇಲೆ ಅದರ ವಿರುದ್ಧ ಮಾತನಾಡುವುದಿಲ್ಲ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.