ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೆಮಿಗೆ ಸಾತ್ವಿಕ್‌–ಚಿರಾಗ್ ಯೋಸು, ಕೊರಿಯಾ (ಪಿಟಿಐ): ಗೆಲುವಿನ ಓಟ ಮುಂದುವರಿಸಿರುವ ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಇಲ್ಲಿ ನಡೆಯುತ್ತಿರುವ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿತು. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ 21–14, 21–17 ರಿಂದ ಜಪಾನ್‌ನ ತಕುರೊ ಹೊಕಿ ಮತ್ತು ಯೂಗೊ ಕೊಬಯಾಶಿ ಅವರನ್ನು ಮಣಿಸಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಸಾತ್ವಿಕ್‌–ಚಿರಾಗ್‌, ಐದನೇ ಶ್ರೇಯಾಂಕದ ಜೋಡಿಯನ್ನು ಮಣಿಸಲು 40 ನಿಮಿಷಗಳನ್ನು ತೆಗೆದುಕೊಂಡರು. ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಅವರು, 2021ರ ವಿಶ್ವ ಚಾಂಪಿಯನ್‌ ಆಗಿರುವ ಚೀನಾದ ವೀ ಕೆಂಗ್‌ ಲಿಯಾಂಗ್– ಚಾಂಗ್‌ ವಾಂಗ್ ಅವರನ್ನು ಎದುರಿಸಲಿದ್ದಾರೆ. ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಬೇಗನೇ ನಿರ್ಗಮಿಸಿರುವುದರಿಂದ ಇದೀಗ ಟೂರ್ನಿಯಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಅವರು ಭಾರತದ ಭರವಸೆಯಾಗಿ ಉಳಿದುಕೊಂಡಿದ್ದಾರೆ. ಕಳೆದ ತಿಂಗಳು ನಡೆದಿದ್ದ ಇಂಡೊನೇಷ್ಯಾ ಓಪನ್‌ನಲ್ಲಿ ಚಾಂಪಿಯನ್‌ ಆದ ಬಳಿಕ ಇದೇ ಮೊದಲ ಟೂರ್ನಿ ಆಡುತ್ತಿರುವ ಸಾತ್ವಿಕ್‌–ಚಿರಾಗ್‌ ಮೊದಲ ಗೇಮ್‌ಅನ್ನು ಸುಲಭವಾಗಿ ಗೆದ್ದುಕೊಂಡರು. ಎರಡನೇ ಗೇಮ್‌ನ ಆರಂಭದಲ್ಲಿ 3–6 ರಿಂದ ಹಿನ್ನಡೆಯಲ್ಲಿದ್ದರೂ, ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಸತತ ಆರು ಪಾಯಿಂಟ್ಸ್‌ ಕಲೆಹಾಕಿ 14–9 ರಿಂದ ಮೇಲುಗೈ ಪಡೆದರು. ಮರುಹೋರಾಟ ನಡೆಸಿದ ಜಪಾನ್‌ ಜೋಡಿ 16–16 ರಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯಕ್ಕೆ ರೋಚಕತೆ ಬಂತು. ಆದರೆ ಈ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ ಸಾತ್ವಿಕ್‌–ಚಿರಾಗ್, ಗೇಮ್‌ ಗೆದ್ದುಕೊಂಡು ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.