ವೇಟ್‌ಲಿಫ್ಟಿಂಗ್: ಭಾರತಕ್ಕೆ 2 ಬೆಳ್ಳಿ ಗ್ರೇಟರ್‌ ನೊಯ್ಡಾ : ಭಾರತದ ಜ್ಞಾನೇಶ್ವರಿ ಯಾದವ್ ಮತ್ತು ಕೊಯೆಲ್ ಬಾರ್ ಅವರು ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಜೂನಿಯರ್‌ ಮತ್ತು ಯೂತ್‌ ವಿಭಾಗದ 49 ಕೆ.ಜಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಗೌತಮ ಬುದ್ಧ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಭಾನುವಾರ ಜ್ಞಾನೇಶ್ವರಿ ಅವರು 175 ಕೆ.ಜಿ (78+ 97ಕೆ.ಜಿ) ಭಾರ ಎತ್ತಿದರು. ಈ ತಿಂಗಳ ಆರಂಭದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಇಲ್ಲಿ ಚಿನ್ನ ಗೆದ್ದಿದ್ದರು. ‌ಟೋಕಿಯೊ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತರಾಗಿದ್ದ ಮೀರಾಬಾಯಿ ಚಾನು ಅನುಪಸ್ಥಿತಿಯಲ್ಲಿ ಭಾರತದ ಅಭಿಯಾನವನ್ನು ಅವರು ಮುನ್ನಡೆಸಿದರು. ಈ ಸ್ಪರ್ಧೆಯಲ್ಲಿ ಫಿಲಿಪ್ಪೀನ್ಸ್‌ನ ರೋಸೆಗಿ ರಾಮೋಸ್ (182 ಕೆ.ಜಿ) ಚಿನ್ನ, ವಿಯೆಟ್ನಾಂನ ಬರ್ಚ್ ಟ್ರಾಮ್ ನಗ್ಯುನ್ (169 ಕೆ.ಜಿ) ಕಂಚು ಗೆದ್ದರು. ಕೊಯೆಲ್ ಅವರು 155 ಕೆ.ಜಿ (69+ 86 ಕೆ.ಜಿ) ಭಾರ ಎತ್ತಿದರು. ಈ ಸ್ಪರ್ಧೆಯಲ್ಲಿ ಫಿಲಿಪ್ಪೀನ್ಸ್‌ನ ಜೊಡಿ ಪೆರಾಲ್ಟಾ (160 ಕೆ.ಜಿ) ಮತ್ತು ಥಾಯ್ಲೆಂಡ್‌ನ ಫನಿಡಾ ಡೆಂಡುವಾಂಗ್ (151 ಕೆ.ಜಿ) ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.