ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಮೇಲೆ ಚಿತ್ತ ಸಿಡ್ನಿ: ಪ್ರಶಸ್ತಿ ಬರ ಎದುರಿಸುತ್ತಿರುವ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌ ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫಾರ್ಮ್‌ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ. ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಮುನ್ನ ಹಳೆಯ ಲಯಕ್ಕೆ ಮರಳಲು ಸಿಂಧು ಮತ್ತು ಶ್ರೀಕಾಂತ್‌ ಅವರಿಗೆ ಲಭಿಸುವ ಕೊನೆಯ ಅವಕಾಶ ಇದು. 2019 ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದ ಸಿಂಧು, ಮೊದಲ ಸುತ್ತಿನಲ್ಲಿ ಭಾರತದವರೇ ಆದ ಅಶ್ಮಿತಾ ಚಲಿಹಾ ಅವರನ್ನು ಎದುರಿಸುವರು. ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಇವರು ಈ ಹಿಂದೆ ಒಮ್ಮೆ ಮಾತ್ರ ಎದುರಾಗಿದ್ದಾಗ (2022ರ ಇಂಡಿಯನ್‌ ಓಪನ್‌) ಸಿಂಧು ಗೆದ್ದಿದ್ದರು. ಹೊಸ ಕೋಚ್‌ ಮುಹಮ್ಮದ್‌ ಹಫೀಜ್‌ ಹಾಶಿಮ್‌ ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವ ಸಿಂಧು, ಕಳೆದ ವಾರ ನಡೆದಿದ್ದ ಜಪಾನ್‌ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತಿದ್ದರು. ಸಿಂಧು ಅವರಂತೆ ಶ್ರೀಕಾಂತ್‌ ಕೂಡಾ ಈ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಜಪಾನ್‌ ಓಪನ್‌ ಟೂರ್ನಿಯಲ್ಲಿ ಚೀನಾ ತೈಪೆಯ ಚೌ ತಿಯೆನ್‌ ಚೆನ್‌ ಅವರನ್ನು ಮಣಿಸಿ ಭರವಸೆ ಮೂಡಿಸಿದ್ದರೂ, ಮುಂದಿನ ಸುತ್ತಿನಲ್ಲಿ ಎಚ್‌.ಎಸ್‌.ಪ್ರಣಯ್‌ ಕೈಯಲ್ಲಿ ಸೋತಿದ್ದರು. ವಿಶ್ವದ ಮಾಜಿ ಅಗ್ರ ರ್‍ಯಾಂಕ್‌ನ ಆಟಗಾರ ಮೊದಲ ಸುತ್ತಿನಲ್ಲಿ ಜಪಾನ್‌ನ ಕೆಂಟ ನಿಶಿಮೊಟೊ ವಿರುದ್ಧ ಹಣಾಹಣಿ ನಡೆಸುವರು. ಎಚ್‌.ಎಸ್‌.ಪ್ರಣಯ್‌ ಮತ್ತು ಲಕ್ಷ್ಯ ಸೇನ್‌ ಅವರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದು, ಇಲ್ಲಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಪ್ರಣಯ್‌, ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಇತರ ಮೂರು ಟೂರ್ನಿಗಳಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಜಪಾನ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲುವ ಮುನ್ನ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ವಿಕ್ಟರ್‌ ಅಕ್ಸೆಲ್ಸನ್‌ ಅವರಿಗೆ ಪ್ರಬಲ ಪೈಪೋಟಿ ಒಡ್ಡಿದ್ದರು. ಪ್ರಣಯ್‌, ಮೊದಲ ಸುತ್ತಿನಲ್ಲಿ ಹಾಂಗ್‌ಕಾಂಗ್‌ನ ಲೀ ಚೆಯುಕ್ ಯಿಯು ಅವರ ಸವಾಲು ಎದುರಿಸಲಿದ್ದಾರೆ. ಕೆನಡಾ ಓಪನ್‌ ಚಾಂಪಿಯನ್‌ ಸೇನ್‌ ಅವರು ಚೀನಾದ ಲು ಗುವಾಂಗ್ ಜು ವಿರುದ್ಧದ ಪಂದ್ಯದೊಂದಿಗೆ ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸಲಿದ್ದಾರೆ. ಪುರುಷರ ಡಬಲ್ಸ್‌ ವಿಭಾಗದಲ್ಲಿ ಈ ಋತುವಿನಲ್ಲಿ ನಾಲ್ಕು ಪ್ರಶಸ್ತಿ ಜಯಿಸಿರುವ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಇಲ್ಲಿ ಆಡುತ್ತಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ಗೆ (ಆ.21 ರಿಂದ 27) ಸಿದ್ಧತೆ ನಡೆಸುವ ಉದ್ದೇಶದಿಂದ ಅವರು ಆಡದಿರುವ ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.