ರಷ್ಯಾದ ಟೆನಿಸ್‌ ಆಟಗಾರ್ತಿ ಜೊನರೇವಾಗೆ ಪೋಲೆಂಡ್‌ ಪ್ರವೇಶ ನಿಷೇಧ ವಾರ್ಸಾ, ಪೋಲೆಂಡ್‌ : ರಷ್ಯಾದ ಟೆನಿಸ್‌ ಆಟಗಾರ್ತಿ ವೆರಾ ಜೊನರೇವಾ ಅವರು ಪೋಲೆಂಡ್‌ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಒಳಾಡಳಿತ ಸಚಿವಾಲಯ ತಿಳಿಸಿದೆ. ಜೊನರೇವಾ ಅವರು ವಾರ್ಸಾದಲ್ಲಿ ಸೋಮವಾರ ಆರಂಭವಾಗಲಿರುವ ಡಬ್ಲ್ಯುಟಿಎ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಫ್ರಾನ್ಸ್ ವೀಸಾ ಹೊಂದಿರುವ ಅವರು ಬೆಲ್‌ಗ್ರೇಡ್‌ನಿಂದ ಶುಕ್ರವಾರ ವಾರ್ಸಾಕ್ಕೆ ಬಂದಿಳಿದಿದ್ದರು. ಆದರೆ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ನಿರಾಕರಿಸಲಾಯಿತು. ಅವರು ವಾರ್ಸಾದಿಂದ ಶನಿವಾರ ಮಾಂಟೆನೆಗ್ರೊಗೆ ಪ್ರಯಾಣಿಸಿದ್ದಾರೆ. ರಷ್ಯಾ–ಉಕ್ರೇನ್‌ ಯುದ್ಧದಲ್ಲಿ ಪೋಲೆಂಡ್‌ ಸರ್ಕಾರವು ಉಕ್ರೇನ್‌ಗೆ ಬೆಂಬಲ ನೀಡಿದೆ. ‘ರಷ್ಯಾ ಮತ್ತು ಬೆಲಾರಸ್‌ ನಡೆಸುತ್ತಿರುವ ಯುದ್ಧವನ್ನು ಬೆಂಬಲಿಸುವವರು ನಮ್ಮ ದೇಶಕ್ಕೆ ಪ್ರವೇಶಿಸಲು ಅವಕಾಶವಿಲ್ಲ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. 38 ವರ್ಷದ ಜೊನರೇವಾ ಅವರ ಹೆಸರು ನಿಷೇಧಿತರ ಪಟ್ಟಿಯಲ್ಲಿ ಇದೆ ಎಂದಿದೆ. ಈ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದ ಜೊನರೇವಾ ಅವರು ಈಗ 60ನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.