ಜೂನಿಯರ್ ಹಾಕಿ ತಂಡಕ್ಕೆ ಉತ್ತಮ್ ಸಿಂಗ್‌ ನಾಯಕ ನವದೆಹಲಿ: ಜರ್ಮನಿಯ ಡಸೆಲ್‌ಡಾರ್ಫ್‌ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಭಾಗವಹಿಸುವ ಭಾರತ ಜೂನಿಯರ್‌ ಹಾಕಿ ತಂಡವನ್ನು ಫಾರ್ವಡ್‌ ಆಟಗಾರ ಉತ್ತಮ್‌ ಸಿಂಗ್‌ ಮುನ್ನಡೆಸಲಿದ್ದು, ಬಾಬಿ ಸಿಂಗ್ ಧಾಮಿ ಉಪನಾಯಕರಾಗಿದ್ದಾರೆ ಎಂದು ಹಾಕಿ ಇಂಡಿಯಾ ಗುರುವಾರ ತಿಳಿಸಿದೆ. ಆಗಸ್ಟ್‌ 18 ರಿಂದ 22ರವರೆಗೆ ನಡೆಯುವ ಟೂರ್ನಿಯಲ್ಲಿ 20 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಭಾರತ ಈ ಟೂರ್ನಿಯಲ್ಲಿ ಇಂಗ್ಲೆಂಡ್‌, ಸ್ಪೇನ್‌ ಮತ್ತು ಆತಿಥೇಯ ಜರ್ಮನಿ ತಂಡಗಳ ವಿರುದ್ಧ ಆಡಲಿದೆ. ಈ ಟೂರ್ನಿಯು ಎಫ್‌ಐಎಚ್‌ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿಗೆ ಭಾರತ ತಂಡಕ್ಕೆ ಸಿದ್ಧತೆಯ ಭಾಗವಾಗಿದೆ. ಜೂನಿಯರ್‌ ವಿಶ್ವಕಪ್‌ ಡಿಸೆಂಬರ್ 5 ರಿಂದ 16ರವರೆಗೆ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆಯಲಿದೆ. ಮೋಹಿತ್‌ ಎಚ್‌.ಎಸ್‌. ಮತ್ತು ರಣವಿಜಯ್ ಸಿಂಗ್ ಯಾದವ್ ಅವರು ಗೋಲ್‌ಕೀಪರ್‌ಗಳಾಗಿದ್ದಾರೆ. ಶಾರದಾ ನಂದ್ ತಿವಾರಿ, ರೋಹಿತ್‌, ಅಮನದೀಪ್‌ ಲಾಖ್ರಾ, ಅಮಿರ್‌ ಅಲಿ, ವರಿಬಮ್ ನೀರಜ್ ಕುಮಾರ್‌ ಸಿಂಗ್ ಮತ್ತು ಯೋಗೆಂಬರ್ ರಾವತ್ ರಕ್ಷಣಾ ವಿಭಾಗದಲ್ಲಿ ಇರುವರು. ಸಿ.ಬಿ.ಪೂವಣ್ಣ, ವಿಷ್ಣುಕಾಂತ್‌ ಸಿಂಗ್, ರಾಜಿಂದರ್‌ ಸಿಂಗ್‌, ಅಮನದೀಪ್‌, ಸುನಿತ್‌ ಲಾಖ್ರಾ, ಚೇತನ್‌ ಶರ್ಮಾ ಮತ್ತು ಅಮಿತ್‌ ಕುಮಾರ್‌ ಯಾದವ್ ಅವರು ಮಿಡ್‌ಫೀಲ್ಡರ್‌ಗಳು. ಅರೈಜಿತ್‌ ಸಿಂಗ್ ಹುಂಡಲ್, ಅಂಗದ್ ಬೀರ್ ಸಿಂಗ್‌, ಬಾಬಿ ಸಿಂಗ್ ಧಾಮಿ, ಉತ್ತಮ್ ಸಿಂಗ್ ಮತ್ತು ಸುದೀಪ್ ಚಿರ್ಮಾಕೊ ಅವರು ಮುನ್ಪಡೆಯಲ್ಲಿ ಇರಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.