ಜಪಾನ್‌ ಓಪನ್ ಬ್ಯಾಡ್ಮಿಂಟನ್‌ : ಎಂಟರ ಘಟ್ಟಕ್ಕೆ ಪ್ರಣಯ್, ಲಕ್ಷ್ಯ ಟೋಕಿಯೊ: ಭಾರತದ ಎಚ್‌.ಎಸ್‌.ಪ್ರಣಯ್, ಮೂರು ಗೇಮ್‌ಗಳ ಸೆಣಸಾಟದಲ್ಲಿ ಸ್ವದೇಶದ ಕಿದಂಬಿ ಶ್ರೀಕಾಂತ್‌ ಅವರನ್ನು ಸೋಲಿಸಿ ಜಪಾನ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ತಲುಪಿದರು. ಭಾರತದ ಇನ್ನೊಬ್ಬ ತಾರೆ ಲಕ್ಷ್ಯ ಸೇನ್ ಕೂಡ ಗುರುವಾರ ಎಂಟರ ಘಟ್ಟಕ್ಕೆ ಕಾಲಿಟ್ಟರು. ಉತ್ತಮ ಲಯದಲ್ಲಿರುವ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ವಿಭಾಗದಲ್ಲಿ ಅಂತಿಮ ಎಂಟರ ಘಟ್ಟಕ್ಕೆ ತಲುಪಿದರು. 21 ವರ್ಷದ ಲಕ್ಷ್ಯ 21–14, 21–16 ರಲ್ಲಿ ಜಪಾನ್‌ನ ಕಾಂಟಾ ತ್ಸುಮೆಯಾಮಾ ಅವರನ್ನು ನೇರ ಆಟಗಳಿಂದ ಸೋಲಿಸಿದರು. 27 ವರ್ಷದ ಜಪಾನ್‌ ಆಟಗಾರ ಮೇಲೆ ಗೆಲ್ಲಲು 50 ನಿಮಿಷ ತೆಗೆದುಕೊಂಡರು. ಕಳೆದ ವಾರವಷ್ಟೇ ಕೊರಿಯಾ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡ ಉತ್ಸಾಹದಲ್ಲಿರುವ ಸಾತ್ವಿಕ್‌– ಚಿರಾಗ್ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 21–17, 21–11 ರಿಂದ ಡೆನ್ಮಾರ್ಕ್‌ನ ಲಾಸ್ಸೆ ಮೊಲ್ಹೆಡೆ– ಜೆಪ್ಪೆ ಬೇ ಜೋಡಿಯನ್ನು ಸೋಲಿಸಿತು. ಉತ್ತಮ ಲಯದಲ್ಲಿರುವ ಸಾತ್ವಿಕ್– ಚಿರಾಗ್‌ ಜೋಡಿ ಗೆಲ್ಲಲು ಪ್ರಯಾಸಪಡಿಲಿಲ್ಲ. ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಭಾರತದ ಈ ಜೋಡಿ, ಈ ವರ್ಷ ಕೊರಿಯಾ ಓಪನ್, ಸ್ವಿಸ್‌ ಓಪನ್, ಇಂಡೊನೇಷ್ಯಾ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದೆ. ಭಾರತದ ಆಟಗಾರರು ಮುಖಾಮುಖಿಯಾಗಿದ್ದ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪ್ರಣಯ್ 19–21, 21–19, 21–9 ರಿಂದ ಶ್ರೀಕಾಂತ್ ಅವರನ್ನು ಸೋಲಿಸಿದರು. ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್‌ಸನ್ 21–19, 21–19 ರಿಂದ ಇಂಡೊನೇಷ್ಯಾದ ಚಿಕೊ ದ್ವಿ ವಾರ್ಡೊಯೊ ಅವರನ್ನು ಮಣಿಸಿದರು. ಆದರೆ ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್– ತ್ರೀಸಾ ಜೋಳಿ ಬೇಗನೇ ಹೊರಬಿದ್ದರು. ಜಪಾನ್‌ನ ನಾಮಿ ಮಾತ್ಸುಯಾಮ– ಚಿರಾರು ಶಿಡಾ ಜೋಡಿ 23–21, 21–19 ರಿಂದ ಭಾರತದ ಆಟಗಾರ್ತಿಯರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.