ಅಂತರರಾಷ್ಟ್ರೀಯ ಹಾಕಿ ಟೂರ್ನಿ: ಸ್ಪೇನ್‌ಗೆ ಮಣಿದ ಭಾರತ ಟೆರಾಸಾ, ಸ್ಪೇನ್‌: ಭಾರತ ತಂಡದವರು ಸ್ಪ್ಯಾನಿಷ್‌ ಹಾಕಿ ಫೆಡರೇಷನ್‌ನ 100ನೇ ವರ್ಷದ ಅಂಗವಾಗಿ ಆಯೋಜಿಸಿರುವ ಅಂತರರಾಷ್ಟ್ರೀಯ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ 1–2 ರಿಂದ ಆತಿಥೇಯ ತಂಡಕ್ಕೆ ಶರಣಾದರು. ಮಂಗಳವಾರ ನಡೆದ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ (59ನೇ ನಿ.) ಅವರು ಭಾರತದ ಪರ ಗೋಲು ಗಳಿಸಿದರೆ, ಸ್ಪೇನ್‌ ತಂಡಕ್ಕೆ ಪಾವ್‌ ಕುನಿಲ್ (11) ಮತ್ತು ಜೋಕಿನ್ ಮೆನೀನಿ ಅವರು ಚೆಂಡನ್ನು ಗುರಿ ಸೇರಿಸಿದರು. ಭಾರತ ತಂಡ ಆಕ್ರಮಣಕಾರಿಯಾಗಿ ಆಟ ಆರಂಭಿಸಿದರೂ, ಗೋಲು ಗಳಿಸಲು ಆಗಲಿಲ್ಲ. ಆದರೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸ್ಪೇನ್‌ ತಂಡ ಮೊದಲ ಕ್ವಾರ್ಟರ್‌ನಲ್ಲಿ ಮುನ್ನಡೆ ಪಡೆಯಿತಲ್ಲದೆ, ಮೂರನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ಗಳಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ಅನ್ನು ಸದುಪಯೋಗಪಡಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಇದೇ ಕ್ವಾರ್ಟರ್‌ನ ಕೊನೆಯಲ್ಲಿ ಹರ್ಮನ್‌ಪ್ರೀತ್‌ ಅವರ ಬಿರುಸಿನ ಹೊಡೆತವನ್ನು ಎದುರಾಳಿ ಗೋಲ್‌ಕೀಪರ್‌ ತಡೆದರು. ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ಒಂದು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿಕೊಂಡಿತು. ಸ್ಪೇನ್‌ಗೆ ಬೆನ್ನುಬೆನ್ನಿಗೆ ಎರಡು ಪೆನಾಲ್ಟಿ ಕಾರ್ನರ್‌ಗಳು ಸಿಕ್ಕರೂ ಚೆಂಡನ್ನು ಗುರಿ ಸೇರಿಸಲು ವಿಫಲವಾಯಿತು. ಡ್ರಾ ಪಂದ್ಯದಲ್ಲಿ ಮಹಿಳಾ ತಂಡ: ಭಾರತ ಮಹಿಳಾ ತಂಡದವರು ಒಂದು ಗೋಲಿನ ಹಿನ್ನಡೆ ಅನುಭವಿಸಿದರೂ, ಮರುಹೋರಾಟ ನಡೆಸಿ ಇಂಗ್ಲೆಂಡ್‌ ಜತೆ 1–1 ಗೋಲುಗಳ ಡ್ರಾ ಸಾಧಿಸಲು ಯಶಸ್ವಿಯಾದರು. ಹೋಲಿ ಹಂಟ್‌ ಅವರು 7ನೇ ನಿಮಿಷದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಮುನ್ನಡೆ ತಂದಿತ್ತರು. ಲಾಲ್‌ರೆಮ್‌ಸಿಯಾಮಿ ಅವರು 41ನೇ ನಿಮಿಷದಲ್ಲಿ ಗೋಲು ಗಳಿಸಿ, ಭಾರತ ತಂಡ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾದರು. ಭಾರತ, ತನ್ನ ಮುಂದಿನ ಪಂದ್ಯದಲ್ಲಿ ಗುರುವಾರ ಆತಿಥೇಯ ಸ್ಪೇನ್‌ ತಂಡದ ಸವಾಲು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.