ಹಾಕಿ ಕರ್ನಾಟಕ ಲೀಗ್‌ :ಕೆನರಾ ಬ್ಯಾಂಕ್‌ ತಂಡಕ್ಕೆ ಪ್ರಶಸ್ತಿ ಬೆಂಗಳೂರು: ಕೆನರಾ ಬ್ಯಾಂಕ್‌ ತಂಡವು 7ನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಡಿವೈಇಎಸ್‌ ‘ಎ’ ತಂಡವು ರನ್ನರ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿತು. ಅಕೌಂಟೆಂಟ್‌ ಜನರಲ್‌ ಆಫೀಸ್‌ ರಿಕ್ರಿಯೇಷನ್‌ ಕ್ಲಬ್‌ ತಂಡವು ಮೂರನೇ ಸ್ಥಾನ ಪಡೆಯಿತು. ಮೊದಲ ಮೂರು ಸ್ಥಾನ ಪಡೆದ ತಂಡಗಳು ಟ್ರೋಫಿಯೊಂದಿಗೆ ಕ್ರಮವಾಗಿ ₹50 ಸಾವಿರ, ₹30 ಸಾವಿರ ಮತ್ತು ₹25 ಸಾವಿರ ಬಹುಮಾನ ಪಡೆದುಕೊಂಡವು. ಟೂರ್ನಿಯ ಕೊನೆಯ ದಿನ ನಡೆದ ಪಂದ್ಯದಲ್ಲಿ ಅಕೌಂಟೆಂಟ್‌ ತಂಡವು ಕಸ್ಟಮ್ಸ್‌ ಅಂಡ್‌ ಜಿಎಸ್‌ಟಿ ತಂಡವನ್ನು 5–2ರಿಂದ ಮಣಿಸಿತು. ಅಕೌಂಟೆಂಟ್‌ ತಂಡದ ಮೊಹಮ್ಮದ್‌ ನಯೀಮ್ (17, 46 ನಿ), ನಿತಿನ್‌ ತಿಮ್ಮಯ್ಯ (18 ನಿ), ತ್ರಿಶೂಲ್‌ ಗಣಪತಿ (40 ನಿ) ಮತ್ತು ‌ಮೊಹಮ್ಮದ್‌ ರಹೀಲ್ (45) ಗೋಲು ದಾಖಲಿಸಿದರು. ಜಿಎಸ್‌ಟಿ ತಂಡದ ಚಿರನ್ ಮೇದಪ್ಪ (5 ನಿ), ಎಸ್‌.ವಿ. ಸುನಿಲ್‌ (37) ಚೆಂಡನ್ನು ಗುರಿ ಸೇರಿಸಿದರು. ಮತ್ತೊಂದು ಪಂದ್ಯದಲ್ಲಿ ಕೆನರಾ ಬ್ಯಾಂಕ್‌ ತಂಡವು ಡಿವೈಇಎಸ್‌ ‘ಎ’ ತಂಡದೊಂದಿಗೆ 1–1 ಗೋಲಿನಿಂದ ಡ್ರಾ ಸಾಧಿಸಿತು. ಕೆನರಾ ಬ್ಯಾಂಕ್‌ ತಂಡದ ಎಂ.ಕೆ.ಚೇತನ್‌ (27 ನಿ) ಮತ್ತು ಡಿವೈಇಎಸ್‌ನ ಎಂ.ಕೆ. ಭರತ್‌ (3 ನಿ) ಗೋಲು ದಾಖಲಿಸಿದರು. ಟೂರ್ನಿಯಲ್ಲಿ ಒಟ್ಟು 9 ತಂಡಗಳು ಭಾಗವಹಿಸಿದ್ದು, ತಲಾ ಎಂಟು ಪಂದ್ಯಗಳನ್ನು ಆಡಿವೆ. ಕೆನರಾ ಬ್ಯಾಂಕ್‌ ತಂಡವು 6 ಜಯ ಹಾಗೂ ಎರಡು ಡ್ರಾ ಸಾಧಿಸಿ 20 ಪಾಯಿಂಟ್ಸ್‌ಗಳೊಂದಿಗೆ ಪ್ರಶಸ್ತಿ ಪಡೆದುಕೊಂಡರೆ, ಡಿವೈಇಎಸ್‌ ‘ಎ’ ತಂಡ 17 ಪಾಯಿಂಟ್ಸ್‌ ಕಲೆಹಾಕಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.