ವಿಶ್ವ ಯೂನಿವರ್ಸಿಟಿ ಗೇಮ್ಸ್‌: ಜ್ಯೋತಿ ಯರ‍್ರಾಜಿ ದಾಖಲೆ ಚೆಂಗ್ಡು (ಪಿಟಿಐ): ಭಾರತದ ಭರವಸೆಯ ಅಥ್ಲೀಟ್‌ ಜ್ಯೋತಿ ಯರ‍್ರಾಜಿ ಇಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನ ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಕಂಚು ಗೆದ್ದುಕೊಂಡರು. ಈ ಹಾದಿಯಲ್ಲಿ ಅವರು ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡರು. 23 ವರ್ಷದ ಜ್ಯೋತಿ, ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 12.78 ಸೆ.ಗಳೊಂದಿಗೆ ಮೂರನೇ ಸ್ಥಾನ ಪಡೆದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಾವು ಸ್ಥಾಪಿಸಿದ್ದ ದಾಖಲೆಯನ್ನು (12.82 ಸೆ.) ಅವರು ಮೀರಿ ನಿಂತರು. 12.72 ಸೆ.ಗಳಲ್ಲಿ ಗುರಿ ತಲುಪಿದ ಸ್ಲೊವೇಕಿಯದ ವಿಕ್ಟೋರಿಯಾ ಫಾಸ್ಟರ್‌ ಚಿನ್ನ ಗೆದ್ದರೆ, ಚೀನಾದ ಯಾನಿ ವು (12.76 ಸೆ.) ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು. ಅಮ್ಲಾನ್‌ ಬೊರ್ಗೊಹೈನ್‌ ಅವರು ಪುರುಷರ 200 ಮೀ. ಓಟದಲ್ಲಿ ಕಂಚು ಗೆದ್ದರು. ಋತುವಿನ ಶ್ರೇಷ್ಠ ಸಮಯ ಕಂಡುಕೊಂಡ ಅವರು 20.55 ಸೆ.ಗಳಲ್ಲಿ ಗುರಿ ತಲುಪಿದರು. ಆದರೆ ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ (20.52 ಸೆ.) ಉತ್ತಮಪಡಿಸಿಕೊಳ್ಳುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು. ದಕ್ಷಿಣ ಆಫ್ರಿಕಾದ ತ್ಸೆಬೊ ಇಸಾದೊರ್ ಮತ್ಸೊಸೊ (20.36 ಸೆ.) ಮತ್ತು ಜಪಾನ್‌ನ ಯುದಾಯ್ ನಿಶಿ (20.46 ಸೆ.) ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು. ಶುಕ್ರವಾರ ಗೆದ್ದ ಎರಡು ಪದಕಗಳು ಸೇರಿದಂತೆ ಈ ಕೂಟದಲ್ಲಿ ಭಾರತವು 11 ಚಿನ್ನ, 5 ಬೆಳ್ಳಿ ಮತ್ತು 9 ಕಂಚಿನ ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಚೀನಾ, ಕೊರಿಯಾ ಮತ್ತು ಜಪಾನ್‌ ತಂಡಗಳು ಪದಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.