ಏಷ್ಯನ್ ಹಾಕಿ ಚಾಂಪಿಯನ್‌ಷಿಪ್: ಭಾರತ–ಜಪಾನ್ ಪಂದ್ಯ ಡ್ರಾ ಚೆನ್ನೈ: ಹರ್ಮನ್‌ಪ್ರೀತ್ ಸಿಂಗ್ ಗಳಿಸಿದ ಗೋಲಿನ ಬಲದಿಂದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯನ್ ಹಾಕಿ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಪಾನ್ ವಿರುದ್ಧ ಡ್ರಾ ಸಾಧಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಜಪಾನ್ ತಂಡದ ನಾಗಯೋಶಿ ಕೆನ್ (28ನೇ ನಿಮಿಷ) ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆದರು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಹರ್ಮನ್‌ಪ್ರೀತ್ ಸಿಂಗ್ ತಿರುಗೇಟು ನೀಡಿದರು. 43ನೇ ನಿಮಿಷದಲ್ಲಿ ಲಭಿಸಿದ್ದ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವಲ್ಲಿ ಅವರು ಸಫಲರಾದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಒಂದರ ಹಿಂದೊಂದು ಪೆನಾಲ್ಟಿ ಕಾರ್ನರ್‌ಗಳು ದೊರೆತರೂ ಜಪಾನ್ ತಂಡದ ರಕ್ಷಣಾ ಪಡೆ ಮೇಲುಗೈ ಸಾಧಿಸಿತು. ಇದರಿಂದಾಗಿ ಜಯ ಸಾಧಿಸುವ ಭಾರತ ತಂಡದ ಆಸೆ ಕೈಗೂಡಲಿಲ್ಲ. ಗುರುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಪಾಕ್–ಕೊರಿಯಾ ಡ್ರಾ: ಪಾಕಿಸ್ತಾನ ತಂಡದ ಗೆಲುವಿನ ಕನಸಿಗೆ ಅಡ್ಡಿಯಾದ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವು ಪಂದ್ಯವನ್ನು 1–1ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಯಿತು. ಗುರುವಾರದ ಪಂದ್ಯದಲ್ಲಿ ಪಾಕ್ ತಂಡವು 1–3ರಿಂದ ಮಲೇಷ್ಯಾ ವಿರುದ್ಧ ಸೋತಿತ್ತು. ಶುಕ್ರವಾರ ಕೊರಿಯಾ ವಿರುದ್ಧ ಗೆಲುವಿನ ಛಲದಲ್ಲಿತ್ತು. ತಂಡದ ಅಬ್ಚುಲ್ ಶಹೀದ್ ಒಂಬತ್ತನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 1–0 ಮುನ್ನಡೆ ಒದಗಿಸಿಕೊಟ್ಟರು. ಆದರೆ 53ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಕೊರಿಯಾದ ಜಿಹುನ್ ಯಾಂಗ್ ಗೋಲು ಹೊಡೆದು ಸಮಬಲ ಸಾಧಿಸಿದರು. 200ನೇ ಪಂದ್ಯ: ಪಾಕಿಸ್ತಾನ ತಂಡದ ನಾಯಕ ಉಮರ್ ಭುಟ್ಟಾ ಅವರಿಗೆ ಇದು 200ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಪಂದ್ಯಕ್ಕೂ ಮುನ್ನ ಅವರನ್ನು ಹಾಕಿ ಇಂಡಿಯಾ ವತಿಯಿಂದ ಗೌರವಿಸಲಾಯಿತು. ಮಲೇಷ್ಯಾ ಜಯಭೇರಿ: ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ ತಂಡವು 5–1ರಿಂದ ಚೀನಾ ಬಳಗವನ್ನು ಮಣಿಸಿತು. ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೀನಾ ತಂಡದ ಚಾಂಗ್‌ಕಾಂಗ್ ಚೆನ್ ನಾಲ್ಕನೇ ನಿಮಿಷದಲ್ಲಿಯೇ ಗೋಲು ಗಳಿಸಿದರು. ಇದರೊಂದಿಗೆ ತಂಡಕ್ಕೆ ಮಹತ್ವದ ಮುನ್ನಡೆ ನೀಡಿದರು. ಆದರೆ ಇದನ್ನು ಉಳಿಸಿಕೊಳ್ಳುವಲ್ಲಿ ಚೀನಾ ಎಡವಿತು. ಏಳನೇ ನಿಮಿಷದಲ್ಲಿ ಮಲೇಷ್ಯಾದ ಫೈಜಲ್ ಸಾರಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿದರು. 15ನೇ ನಿಮಿಷದಲ್ಲಿ ಅಬು ಕಮಲ್ ಅಝರೈ, 45 ಹಾಗೂ49ನೇ ನಿಮಿಷದಲ್ಲಿ ಫಿರ್ಹಾನ್ ಅಶಾರಿ ಮತ್ತು 57ನೇ ನಿಮಿಷದಲ್ಲಿ ನಜ್ಮಿ ಜಜಲಾನ್ ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.