ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ರಾಜಾವತ್, ಪ್ರಣಯ್ ಸಿಡ್ನಿ (ಪಿಟಿಐ): ಅನುಭವಿ ಎಚ್‌.ಎಸ್‌.ಪ್ರಣಯ್ ಮತ್ತು ಉದಯೋನ್ಮುಖ ಆಟಗಾರ ಪ್ರಿಯಾನ್ಷು ರಾಜಾವತ್‌ ಅವರು ಭಿನ್ನ ಶೈಲಿಯಲ್ಲಿ ಜಯಗಳಿಸಿ ಆಸ್ಟ್ರೇಲಿಯಾ ಓಪನ್ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರೆ, ಪ್ರಮುಖ ಆಟಗಾರ್ತಿ ಪಿ.ವಿ.ಸಿಂಧು ಕ್ವಾರ್ಟರ್‌ಫೈನಲ್‌ನಲ್ಲೇ ನಿರ್ಗಮಿಸಿದರು. ಆರ್ಲಿನ್ಸ್‌ ಮಾಸ್ಟರ್ಸ್‌ ಚಾಂಪಿಯನ್ ಆಗಿರುವ ರಾಜಾವತ್ 21–13, 21–8 ರಿಂದ ಸ್ವದೇಶದ ಕಿದಂಬಿ ಶ್ರೀಕಾಂತ್ ಅವರನ್ನು ನೇರ ಆಟಗಳಿಂದ ಹಿಮ್ಮೆಟ್ಟಿಸಿ ಮೊದಲ ಬಾರಿ ಸೂಪರ್‌ 500 ಹಂತದ ಟೂರ್ನಿಯ ನಾಲ್ಕರ ಘಟ್ಟ ತಲುಪಿದರು. ವಿಶ್ವದ ಒಂಬತ್ತನೇ ಕ್ರಮಾಂಕದ ಆಟಗಾರ ಪ್ರಣಯ್ ಹಿನ್ನಡೆಯಿಂದ ಚೇತರಿಸಿಕೊಂಡು ಎರಡನೇ ಕ್ರಮಾಂಕದ ಸಿನಿಸುಕ ಜಿಂಟಿಂಗ್ (ಇಂಡೊನೇಷ್ಯಾ) ಅವರನ್ನು 16–21, 21–17, 21–14 ರಿಂದ ಸೋಲಿಸಿದರು. ಈ ಪಂದ್ಯವನ್ನು ಗೆಲ್ಲಲು ಆರನೇ ಶ್ರೇಯಾಂಕದ ಪ್ರಣಯ್‌ ಅವರಿಗೆ 1 ಗಂಟೆ 13 ನಿಮಿಷ ಬೇಕಾಯಿತು. ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಸಿಂಧು ಅವರು ಅಮೆರಿಕದ ಆಟಗಾರ್ತಿ, 33 ವರ್ಷದ ಬೀವೆನ್ ಝಾಂಗ್ ಎದುರು 12–21, 17–21 ರಿಂದ ಸೋತರು. ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಚೀನಾ ಸಂಜಾತೆ ಬೀವೆನ್ 39 ನಿಮಿಷಗಳಲ್ಲಿ ಜಯಶಾಲಿಯಾದರು. ಈ ಹಿಂದೆ ಇವರಿಬ್ಬರು 10 ಸಲ ಮುಖಾಮುಖಿ ಆದಾಗ ಸಿಂಧು ಆರು ಬಾರಿ ಜಯಗಳಿಸಿದ್ದರು. ಇದು ಡೆನ್ಮಾರ್ಕ್‌ನ ಕೋಪೆನ್‌ಹ್ಯಾಗನ್‌ನಲ್ಲಿ ಆ.21ರಿಂದ 27ರವರೆಗೆ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ ಮುನ್ನ ಕೊನೆಯ ಟೂರ್ನಿ ಆಗಿರುವುದರಿಂದ ಸಿಂಧು ನಿರಾಶೆ ಅನುಭವಿಸಬೇಕಾಯಿತು. 21 ವರ್ಷದ ಮಧ್ಯಪ್ರದೇಶ ಆಟಗಾರ ರಾಜಾವತ್‌ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿವಿಧ ಟೂರ್ನಿಗಳಲ್ಲಿ ಜಿಂಟಿಂಗ್‌, ಜಪಾನ್‌ನ ಕೊಡೈ ನರವೋಕಾ, ಸ್ವದೇಶದ ಲಕ್ಷ್ಯ ಸೇನ್ ಅವರಿಗೆ ಮಣಿದರೂ ಪಂದ್ಯಗಳನ್ನು ಮೂರು ಗೇಮ್‌ಗಳವರೆಗೆ ಎಳೆದಿದ್ದಾರೆ. ಈ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ ಅವರು ತಮಗಿಂತ ಅನುಭವಿ ಶ್ರೀಕಾಂತ್‌ ವಿರುದ್ಧ ವೇಗದ ಜೊತೆಗೆ ಕರಾರುವಾಕ್‌ ಹೊಡೆತಗಳಿಂದ ಹಿಡಿತ ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.