ವಿಶ್ವನಾಥನ್‌ ಹಿಂದಿಕ್ಕಿದ 17 ವರ್ಷದ ಗುಕೇಶ್ ಡಿ! ಭಾರತದ ಅಗ್ರಮಾನ್ಯ ಚೆಸ್ ಆಟಗಾರ ಬಾಕು (ಅಜರ್‌ಬೈಜಾನ್): ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್‌ ಗುಕೇಶ್‌ ಡಿ ಅವರು ಸ್ಥಳೀಯ ಆಟಗಾರ ಅವರನ್ನು ಗುರುವಾರ ವಿಶ್ವಕಪ್‌ ಚೆಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋಲಿಸಿದರು. ಆ ಮೂಲಕ ಫಿಡೆ ಲೈವ್‌ ರೇಟಿಂಗ್‌ನಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರನ್ನು ಹಿಂದೆಹಾಕಿ ಭಾರತದ ಅಗ್ರಮಾನ್ಯ ಆಟಗಾರ ಎನಿಸಿದರು. ‌17 ವರ್ಷದ ದೊಮ್ಮರಾಜು ಗುಕೇಶ್ 44 ನಡೆಗಳಲ್ಲಿ ಇಸ್ಕಂದರೋವ್ ಅವರನ್ನು ಸೋಲಿಸಿದರು. ಆ ಮೂಲಕ ಮುಂದಿನ ತಿಂಗಳ ಆರಂಭದಲ್ಲಿ ಪ್ರಕಟವಾಗುವ ಫಿಡೆ ರೇಟಿಂಗ್‌ನಲ್ಲಿ ಅವರು ವಿಶ್ವದ ಟಾಪ್‌ ಟೆನ್‌ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತಗೊಂಡಿದೆ. ‘ಗುಕೇಶ್ ಮತ್ತೆ ಗೆದಿದ್ದಾರೆ ಮತ್ತು ವಿಶ್ವನಾಥನ್ ಆನಂದ್ ಅವರನ್ನು ಲೈವ್ ರೇಟಿಂಗ್‌ನಲ್ಲಿ (ಟೂರ್ನಿ ನಡೆಯುವ ವೇಳೆ ಆಟಗಾರರ ರೇಟಿಂಗ್‌ಗೆ ಈ ಪದ ಬಳಲಾಗುತ್ತದೆ) ಹಿಂದೆಹಾಕಿದ್ದಾರೆ. ಮುಂದಿನ ರೇಟಿಂಗ್‌ ಪಟ್ಟಿಯಲ್ಲಿ 17 ವರ್ಷದ ಆಟಗಾರ ಅತಿ ಹೆಚ್ಚಿನ ರೇಟಿಂಗ್ ಪಡೆದ ಭಾರತದ ಆಟಗಾರನಾಗಲಿದ್ದಾರೆ’ ಎಂದು ಇಂಟರ್‌ನ್ಯಾಷನಲ್‌ ಚೆಸ್‌ ಫೆಡರೇಷನ್‌ (ಫಿಡೆ) ಟ್ವೀಟ್‌ನಲ್ಲಿ ತಿಳಿಸಿದೆ. ವಿಶ್ವಕಪ್‌ನಲ್ಲಿ ಗಳಿಸಿದ 2.5 ರೇಟಿಂಗ್‌ ಪಾಯಿಂಟ್‌ನಿಂದ ಅವರು 2755.9 ಪಾಯಿಂಟ್ಸ್‌ ಹೊಂದಿದ್ದಾರೆ. ಆನಂದ್ ಅವರು 2754.0 ಪಾಯಿಂಟ್ಸ್‌ ಹೊಂದಿದ್ದಾರೆ. ಹೀಗಾಗಿ ಅವರು ವಿಶ್ವದ 9ನೇ ಕ್ರಮಾಂಕ್ಕೆ ಏರಲಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್‌ 19ನೇ ಕ್ರಮಾಂಕಕ್ಕೆ ಇಳಿಯುವ ಸಾಧ್ಯತೆ ಇದೆ. ಆನಂದ್ 1991ರ ಜುಲೈನಲ್ಲಿ ಮೊದಲ ಬಾರಿ ವಿಶ್ವದ ಟಾಪ್‌ 10 ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 1987ರಿಂದೀಚೆಗೆ ಅವರು ಭಾರತದ ಅಗ್ರಮಾನ್ಯ ಆಟಗಾರನ ಪಟ್ಟ ಉಳಿಸಿಕೊಂಡಿದ್ದಾರೆ. 2016ರಲ್ಲಿ ಅತ್ಯಲ್ಪ ಅವಧಿಗೆ ಪಿ.ಹರಿಕೃಷ್ಣ ಅವರು ಆನಂದ್ ಅವರನ್ನು ಹಿಂದೆಹಾಕಿದ್ದರು. ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಪ್ರಗ್ನಾನಂದ, ನಿಹಾಲ್ ಸರೀನ್ ಕೂಡ ಗುರುವಾರ ಮೂರನೇ ಸುತ್ತನ್ನು ತಲುಪಿದ್ದಾರೆ. ಗ್ರ್ಯಾಂಡ್‌ಮಾಸ್ಟರ್‌ ಅಧಿಬನ್, 0.5–1.5 ರಿಂದ ಡೇನಿಯಲ್‌ ಡುಬೋವ್ ಎದುರು ಸೋಲನ್ನು ಕಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.