ಜಾವೆಲಿನ್‌: ನಾಲ್ವರಿಗೆ ಅರ್ಹತೆ, ಮೂವರು ಭಾಗಿ ನವದೆಹಲಿ: ಭಾರತದ ಅಥ್ಲೆಟಿಕ್ಸ್‌ನಲ್ಲಿ ಅಪರೂಪದ ನಿದರ್ಶನ ಎಂಬಂತೆ ನಾಲ್ಕು ಮಂದಿ ಜಾವೆಲಿನ್‌ ಥ್ರೊ ಸ್ಪರ್ಧಿಗಳು, ಹಂಗೆರಿಯ ಬುಡಾಪೆಸ್ಟ್‌ನಲ್ಲಿ ಈ ತಿಂಗಳ 19ರಿಂದ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ. ಆದರೆ ಒಬ್ಬರು ಗಾಯಾಳಾಗಿದ್ದು, ಪ್ರತಿಷ್ಠಿತ ಕೂಟದಲ್ಲಿ ಭಾಗವಹಿಸುತ್ತಿಲ್ಲ. ಡೈಮಂಡ್‌ ಲೀಗ್‌ ಚಾಂಪಿಯನ್ ಆಗಿರುವ ನೆಲೆಯಲ್ಲಿ ಅಗ್ರಮಾನ್ಯ ಜಾವೆಲಿನ್ ಪಟು ನೀರಜ್ ಚೋಪ್ರಾ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ. ವಿಶ್ವ ರ್‍ಯಾಂಕಿಂಗ್‌ ಕೋಟಾದಡಿ ಕಿಶೋರ್ ಜೇನಾ ಅವರೂ ಅರ್ಹತೆ ಪಡೆದಿದ್ದಾರೆ. ಅರ್ಹತಾ ಮಾನದಂಡ ಪೂರೈಸಿರುವ ರೋಹಿತ್ ಯಾದವ್ ಮತ್ತು ಡಿ.ಪಿ. ಮನು ಅವರ ಹೆಸರೂ, ವಿಶ್ವ ಚಾಂಪಿಯನ್‌ಷಿಪ್‌ನ ಜಾವೆಲಿನ್‌ ಸ್ಪರ್ಧೆಯ 36 ಮಂದಿಯ ಪಟ್ಟಿಯಲ್ಲಿ ಇದೆ. ಆದರೆ ರೋಹಿತ್‌ ಅವರು ಬಲ ಮೊಣಕೈಗೆ ನೋವು ಅನುಭವಿಸುತ್ತಿದ್ದ ಕಾರಣ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಪಾಲ್ಗೊಳ್ಳಲಾಗುತ್ತಿಲ್ಲ. ಬುಡಾಪೆಸ್ಟ್‌ ಕೂಟದಲ್ಲಿ ಅರ್ಹತೆ ಪಡೆದಿರುವ ಸ್ಪರ್ಧಿಗಳ ಪಟ್ಟಿಯನ್ನು ವಿಶ್ವ ಅಥ್ಲೆಟಿಕ್ಸ್‌ ಪರಿಷ್ಕರಿಸಿದ್ದು, ಇದರಲ್ಲಿ ಜೇನಾ ಅವರು 36ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಶ್ರೀಲಂಕಾದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರು ಜಾವೆಲಿನ್‌ಅನ್ನು 84.38 ಮೀ. ಎಸೆದು ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದ್ದರು. ಸ್ಪರ್ಧೆಯೊಂದರಲ್ಲಿ ಒಂದು ದೇಶದ ಮೂವರು ಅಥ್ಲೀಟುಗಳಿಗೆ ಭಾಗವಹಿಸಲು ಅವಕಾಶವಿದೆ. ಆದರೆ ವೈಲ್ಡ್‌ಕಾರ್ಡ್‌ ಇದ್ದ ಪಕ್ಷದಲ್ಲಿ ಮತ್ತೊಬ್ಬರು ಪಾಲ್ಗೊಳ್ಳಬಹುದು. ಭಾರತದ ಪ್ರಕರಣಕ್ಕೆ ಸಂಬಂಧಿಸಿ, ಚೋಪ್ರಾ ವೈಲ್ಡ್‌ಕಾರ್ಡ್‌ ಪಡೆದಿದ್ದಾರೆ. ಹೀಗಾಗಿ, ಅರ್ಹತೆ ಪಡೆದಲ್ಲಿ ಭಾರತದ ಮತ್ತೊಬ್ಬ ಜಾವೆಲಿನ್‌ ಪಟುವಿಗೆ ಭಾಗವಹಿಸಲು ಅವಕಾಶವಿದೆ. ಆದರೆ ಈ ವಿಷಯದಲ್ಲಿ ಅಂತಿಮ ನಿರ್ಧಾರ ಭಾರತ ಅಥ್ಲೆಟಿಕ್‌ ಫೆಡರೇಷನ್ ವಿವೇಚನೆಗೆ ಸೇರಿದ್ದು. ಅದು ಮೂರನೇ ಅಥ್ಲೀಟನ್ನು ಕಳಿಸದೇ ಇರಬಹುದು. ಅಥ್ಲೀಟ್‌ ಒಬ್ಬರು ಪ್ರಮುಖ ಕೂಟದಲ್ಲಿ ಅರ್ಹತಾ ಮಟ್ಟ ದಾಟಿ ಅರ್ಹತೆ ಪಡೆಯಬಹುದು. ರ್‍ಯಾಂಕಿಂಗ್‌ ಮೂಲಕವೂ ಅರ್ಹತೆ ಪಡೆಯಬಹುದು. ಪುರುಷರ 20 ಕಿ.ಮೀ. ರೇಸ್‌ ವಾಕ್‌ನಲ್ಲಿ ಭಾರತದ ಮೂವರು ಸ್ಪರ್ಧಿಗಳು ಅರ್ಹತೆ ಪಡೆದಿದ್ದಾರೆ. ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್‌, ಪರಮಜೀತ್‌ ಬಿಷ್ಠ್ ಈ ಮೂವರು. ಮಹಿಳೆಯರ 20 ಕಿ.ಮೀ. ರೇಸ್‌ವಾಕ್‌ನಲ್ಲಿ ಪ್ರಿಯಾಂಕಾ ಗೋಸ್ವಾಮಿ ಅರ್ಹತಾ ಮಾನದಂಡ ತಲುಪಿದ್ದಾರೆ. ಭಾವನಾ ಜಾಟ್ ಅವರು ರ್‍ಯಾಂಕಿಂಗ್‌ ಕೋಟಾದಡಿ ಅವಕಾಶ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.