ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸಿಂಧು, ಶ್ರೀಕಾಂತ್‌, ಪ್ರಣಯ್ ಸಿಡ್ನಿ (ಪಿಟಿಐ): ಭಾರತದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್ ಅವರು ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಸೂಪರ್‌ 500 ಟೂರ್ನಿಯಲ್ಲಿ ಗುರುವಾರ ಎಂಟರ ಘಟ್ಟ ಪ್ರವೇಶಿಸಿದರು. ಇವರಲ್ಲಿ ಆರನೇ ಶ್ರೇಯಾಂಕದ ಪ್ರಣಯ್ ಮಾತ್ರ ಗೆಲ್ಲಲು ಪ್ರಯಾಸಪಡಬೇಕಾಯಿತು. ಐದನೇ ಶ್ರೇಯಾಂಕದ ಸಿಂಧು ಮಹಿಳೆಯರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ 21–14, 21–10 ರಲ್ಲಿ ಸ್ವದೇಶದ ಆಕರ್ಷಿ ಕಶ್ಯಪ್ ಅವರನ್ನು ಹಿಮ್ಮೆಟ್ಟಿಸಿದರು. ಒಲಿಂಪಿಕ್‌ ಪದಕ ವಿಜೇತೆ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಬೀವೆನ್‌ ಝಾಂಗ್‌ (ಅಮೆರಿಕ) ಅವರನ್ನು ಎದುರಿಸುವರು. ಶ್ರೀಕಾಂತ್‌, ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ ಚೀನಾ ತೈಪೆಯ ಲಿ ಯಾಂಗ್‌ ಸು ಅವರನ್ನು 21–10, 21–17 ರಿಂದ ಮಣಿಸಿದರು. ಆದರೆ ಪ್ರಣಯ್ ಅವರು ಚೀನಾ ತೈಪೆಯ ಯು ಜೆನ್‌ ಚಿ ಅವರನ್ನು 19–21, 21–19, 21–13 ರಿಂದ ಸೋಲಿಸಲು 74 ನಿಮಿಷ ಹೋರಾಡಬೇಕಾಯಿತು. ಭರವಸೆ ಮೂಡಿಸಿರುವ ಭಾರತದ ಆಟಗಾರ ಪ್ರಿಯಾಂಶು ರಾಜಾವತ್‌ ಯಶಸ್ಸಿನ ಓಟ ಮುಂದುವರಿಸಿ 21–8, 13–21, 21–19 ರಿಂದ ಚೀನಾ ತೈಪೆಯ ತ್ಜು ವಿ ವಾಂಗ್ ಮೇಲೆ ಜಯ ಪಡೆದರು. ಈ ಪಂದ್ಯ 59 ನಿಮಿಷ ನಡೆಯಿತು. ಆದರೆ ಭಾರತದ ಮಿಥುನ್ ಮಂಜುನಾಥ್ ಮತ್ತು ಕಿರಣ್‌ ಜಾರ್ಜ್ ಅವರ ಸವಾಲು ಅಂತ್ಯಗೊಂಡಿತು. ಬುಧವಾರ ನಾಲ್ಕನೇ ಶ್ರೇಯಾಂಕದ ಕೀನ್‌ ಯು ಲೊ ಅವರಿಗೆ ಆಘಾತ ನೀಡಿದ್ದ ಕನ್ನಡಿಗ ಮಿಥುನ್ ಎರಡನೇ ಸುತ್ತಿನಲ್ಲಿ 13–21, 21–12, 19–21 ರಿಂದ ಮಲೇಷ್ಯಾದ ಝಿ ಜಿಯಾ ಲಿ ಅವರಿಗೆ ಹೋರಾಟ ತೋರಿ ಸೋತರು. ಅಗ್ರ ಶ್ರೇಯಾಂಕದ ಅಂಥೊನಿ ಸಿನಿಸುಕ ಜಿಂಟಿಂಗ್ (ಇಂಡೊನೇಷ್ಯಾ) ಅವರಿಗೆ ಕಿರಣ್‌ ಜಾರ್ಜ್ ಸಾಟಿಯಾಗದೇ 21–15, 21–18 ರಲ್ಲಿ ಸೋತರು. ಪ್ರಣಯ್, ಕ್ವಾರ್ಟರ್‌ಫೈನಲ್‌ನಲ್ಲಿ ಜಿಂಟಿಂಗ್‌ ಎದುರು ಆಡಬೇಕಾಗಿದೆ. ಇನ್ನೊಂದು ಪಂದ್ಯದಲ್ಲಿ ಅನುಭವಿ ಶ್ರೀಕಾಂತ್‌, ಸ್ವದೇಶದ ರಾಜಾವತ್ ಅವರನ್ನು ಎದುರಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಭಾರತದ ತ್ರಿಸಾ ಜೋಳಿ –ಗಾಯತ್ರಿ ಗೋಪಿಚಂದ್‌ 10–21, 20–22ರಲ್ಲಿ ನಾಲ್ಕನೇ ಶ್ರೇಯಾಂಕದ ಮಯು ಮಾತ್ಸುಮೊಟೊ– ವಾಕನಾ ನಾಗಾಹರಾ (ಜಪಾನ್‌) ಜೋಡಿಗೆ ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.