ಏಷ್ಯನ್ ಚಾಂಪಿಯನ್ಸ್‌ ಹಾಕಿ: ಭಾರತಕ್ಕೆ ಸುಲಭ ತುತ್ತಾದ ಚೀನಾ ಚೆನ್ನೈ: ಗೋಲುಗಳ ಮಳೆಗರೆದ ಭಾರತ ತಂಡ, ಗುರುವಾರ ಆರಂಭವಾದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು 7–2 ಗೋಲುಗಳಿಂದ ಸುಲಭವಾಗಿ ಸೋಲಿಸಿತು. ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡದ ಪರ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ (2), ವರುಣ್ ಕುಮಾರ್‌ (3), ಅಕ್ಷದೀಪ್‌ ಸಿಂಗ್‌ ಮತ್ತು ಮನ್‌ದೀಪ್‌ ಸಿಂಗ್‌ ಗೋಲುಗಳನ್ನು ಗಳಿಸಿದರು. ಚೀನಾ ತಂಡದ ಪರ ವೆನ್‌ ಹುಯಿ ಮತ್ತು ಜೀಷೆಂಗ್‌ ಗಾವೊ ಸೋಲಿನ ಅಂತರ ಕಡಿಮೆ ಮಾಡಿದರು. ಮಲೇಷ್ಯಾಕ್ಕೆ ಮಣಿದ ಪಾಕ್‌: ಫಿರ್ಹಾನ್‌ ಅಶಾರಿ ಗಳಿಸಿದ ಎರಡು ಗೋಲುಗಲ ನೆರವಿನಿಂದ ಮಲೇಷ್ಯಾ ತಂಡ 3–1 ಗೋಲುಗಳಿಂದ ಪಾಕಿಸ್ತಾನ ತಂಡದ ಮೇಲೆ ಜಯಗಳಿಸಿತು. ಅಶಾರಿ 28 ಮತ್ತು 29ನೇ ನಿಮಿಷ ಎರಡು ಗೋಲುಗಳನ್ನು ಗಳಿಸಿದರೆ, ಶೆಲ್ಲೊ ಸಿಲ್ವೇರಿಯಸ್ 44ನೇ ನಿಮಿಷ ಅಂತರವನ್ನು 3–0ಗೆ ಹೆಚ್ಚಿಸಿದರು. ಪಾಕಿಸ್ತಾನದ ಪರ ಏಕೈಕ ಗೋಲನ್ನು ಅಬ್ದುಲ್ ರೆಹಮಾನ್ 55ನೇ ನಿಮಿಷ ಗಳಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳ ನಡುವೆ ಹೋರಾಟ ಕಂಡುಬಂದಿತು. ಉಭಯ ತಂಡಗಳಿಗೆ ಒಂದೊಂದು ಪೆನಾಲ್ಟಿ ಕಾರ್ನರ್‌ ಸಹಿತ ಗೋಲಿನ ಅವಕಾಶಗಳು ದೊರಕಿದವು. ಆದರೆ ಅವು ಗೋಲಾಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲೂ ಇದೇ ಸ್ಥಿತಿ ಮುಂದುವರಿಯಿತು. ಆದರೆ ವಿರಾಮಕ್ಕೆ ಸ್ವಲ್ಪ ಮೊದಲು ಎರಡು ನಿಮಿಷಗಳ ಅಂತರದಲ್ಲಿ ಮಲೇಷ್ಯಾ ಎರಡು ಗೋಲುಗಳನ್ನು ಗಳಿಸಿ ಮೇಲುಗೈ ಸಾಧಿಸಿತು. ಮಧ್ಯಂತರ ನಂತರ ಸ್ವಲ್ಪ ಒರಟು ಆಟವೂ ಕಂಡುಬಂತು. ಇನ್ನೊಂದೆಡೆ ಮೂರನೇ ಕ್ವಾರ್ಟರ್‌ ಮುಗಿಯಲು ಕೆಲವೇ ಕ್ಷಣಗಳಿರುವಾಗ ಮಲೇಷ್ಯಾದ ಸಿಲ್ವೇರಿಯಸ್‌, ಪಾಕ್‌ ಗೋಲ್‌ಕೀಪರ್‌ ಅಕ್ಮಲ್ ಹುಸೇನ್ ಅವರನ್ನು ವಂಚಿಸಿ ಗೋಲು ಗಳಿಸಿದರು. ಈ ಗೋಲಿಗೆ ಉತ್ತಮ ಪಾಸ್‌ ನೀಡಿದ ಫೈಸಲ್ ಸಾರಿ ಅವರ ಶ್ರಮವೂ ಇತ್ತು. ಆದರೆ 55ನೇ ನಿಮಿಷ ಪಾಕಿಸ್ತಾನ ಕೊನೆಗೂ ರೆಹಮಾನ್ ಮೂಲಕ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿ ಆಯಿತು. ಕೊರಿಯಾ ಶುಭಾರಂಭ: ಕಳೆದ ಬಾರಿಯ ಚಾಂಪಿಯನ್‌ ದಕ್ಷಿಣ ಕೊರಿಯಾ ತಂಡ ಉತ್ತಮ ಹೋರಾಟ ಕಂಡುಬಂದ ಪಂದ್ಯದಲ್ಲಿ 2–1 ಗೋಲುಗಳಿಂದ ಜಪಾನ್‌ ತಂಡವನ್ನು ಸೋಲಿಸಿ ಶುಭಾರಂಭ ಮಾಡಿತು. ಆರನೇ ನಿಮಿಷ ಜಪಾನ್ ಆಟಗಾರ್ತಿ ರಿಯೊಮಾ ಊಕಾ ಟೂರ್ನಿಯ ಮೊದಲ ಗೋಲು ಗಳಿಸಿದರು. 26ನೇ ನಿಮಿಷ ಚಿಯೊಲಿಯೊನ್ ಪಾರ್ಕ್ ಸ್ಕೋರ್‌ ಸಮ ಮಾಡಿದರು. ವಿರಾಮದ ವೇಳೆ ಸ್ಕೋರ್‌ 1–1 ಆಗಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಜುಂಗ್‌ಹೂ ಕಿಮ್‌ ಕೊರಿಯಾ ಪರ ನಿರ್ಣಾಯಕ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.