ಆರ್ಚರಿ: ಅದಿತಿ ಐತಿಹಾಸಿಕ ಸಾಧನೆ ಬರ್ಲಿನ್: ಭಾರತದ ಅದಿತಿ ಸ್ವಾಮಿ ಅವರು ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಮಹಿಳೆಯರ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. 17 ವರ್ಷದ ಅದಿತಿ ಎರಡು ತಿಂಗಳ ಹಿಂದೆ ಜೂನಿಯರ್‌ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದರು. ಇದೀಗ ಸೀನಿಯರ್‌ ವಿಭಾಗದಲ್ಲೂ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಅವರು ಮೆಕ್ಸಿಕೊದ ಆಂಡ್ರಿಯಾ ಬೆಸೆರಾ ವಿರುದ್ಧ ಗೆದ್ದರು. ನಿಖರ ಗುರಿ ಹಿಡಿಯುವಲ್ಲಿ ಯಶಸ್ವಿಯಾದ ಅದಿತಿ ಅವರು ಸಾಧ್ಯವಿರುವ 150 ಪಾಯಿಂಟ್ಸ್‌ಗಳಲ್ಲಿ 149 ಪಾಯಿಂಟ್ಸ್ ಗಳಿಸಿದರೆ, ಆಂಡ್ರಿಯಾ 147 ಪಾಯಿಂಟ್ಸ್‌ ಕಲೆಹಾಕಿದರು. ಅದಿತಿ ಅವರು ಶುಕ್ರವಾರ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರಣೀತ್ ಕೌರ್ ಅವರೊಂದಿಗೆ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಜ್ಯೋತಿಗೆ ಕಂಚು: ಜ್ಯೋತಿ ಸುರೇಖಾ ಅವರು ಇದೇ ವಿಭಾಗದಲ್ಲಿ ಕಂಚು ಗೆದ್ದುಕೊಂಡರು. ಮೂರನೇ ಸ್ಥಾನಕ್ಕಾಗಿ ಪಡೆದ ಸ್ಪರ್ಧೆಯಲ್ಲಿ ಅವರು 150–146 ರಿಂದ ಟರ್ಕಿಯ ಇಪೆಕ್ ತೊರ್ಮುಕ್ ಅವರನ್ನು ಮಣಿಸಿದರು. ಅದಿತಿ, ಸೆಮಿಫೈನಲ್‌ನಲ್ಲಿ 149–145 ರಿಂದ ಜ್ಯೋತಿ ಅವರನ್ನು ಸೋಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.