ಜಿಪಿಬಿಎಲ್‌: ಹರಾಜಿನಲ್ಲಿ 150 ಆಟಗಾರರು ಬೆಂಗಳೂರು: ಗ್ರ್ಯಾನ್‌ಪ್ರೀ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಆಟಗಾರರಿಗೆ ಹೆಚ್ಚು ಹಣ ದೊರೆಯುವಂತಾಗಲು ಬಿಡ್ ಪ್ರಕ್ರಿಯೆಯಲ್ಲಿ ಎರಡು ಹೊಸ ನಿಯಮ ಜಾರಿಗೊಳಿಸಲಾಗಿದೆ. ಮೊದಲನೇಯದಾಗಿ; ಹೋದ ವರ್ಷ ನಡೆದಿದ್ದ ಮೊದಲ ಆವೃತ್ತಿಗಿಂತಲೂ ತಂಡಗಳ ಪರ್ಸ್‌ ಮೊತ್ತವನ್ನು ₹ 12 ಲಕ್ಷದಿಂದ 35 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎರಡನೇಯದಾಗಿ; ಬಿಡ್‌ ಪ್ರಕ್ರಿಯೆಯಲ್ಲಿ ನೋಂದಾಯಿತರಾಗಿರುವ 150 ಆಟಗಾರರಿಗೂ ತಲಾ ₹ 25 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಶನಿವಾರ ನಡೆದ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಜಿಪಿಬಿಎಲ್ ಕಮಿಷನರ್ ಮತ್ತು ಬಿಟ್‌ಸ್ಪೋರ್ಟ್ಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ‍್ರಶಾಂತ್ ರೆಡ್ಡಿ ಈ ವಿಷಯ ತಿಳಿಸಿದರು. ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರು ಟ್ರೋಫಿಯನ್ನು ಅನಾವರಣಗೊಳಿಸಿ ಆಟಗಾರರು ಮತ್ತು ಆಯೋಜಕರಿಗೆ ಶುಭ ಹಾರೈಸಿದರು. ‘ಹೋದ ವರ್ಷ ಉತ್ತಮ ಸ್ಪಂದನೆ ಗಳಿಸಿದ್ದ ಟೂರ್ನಿಯನ್ನು ಈ ಬಾರಿ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದೇವೆ. ಅದಕ್ಕಾಗಿ ಯುವ ಆಟಗಾರರ ಉತ್ತೇಜನಕ್ಕಾಗಿ ಬಿಡ್ ಪ್ರಕ್ರಿಯೆಯಲ್ಲಿರುವ ಎಲ್ಲ ಆಟಗಾರರಿಗೂ ಕನಿಷ್ಠ ಮೊತ್ತದ ಪ್ರೋತ್ಸಾಹಧನ ನಿಗದಿಗೊಳಿಸಲಾಗಿದೆ. ಇದರಲ್ಲಿ 30 ಮಂದಿ ಅಂತರರಾಷ್ಟ್ರೀಯ ಆಟಗಾರರೂ ಇದ್ದಾರೆ, ಇಂತಹ ಯೋಜನೆ ತಂದಿರುವ ದೇಶದ ಮೊದಲ ಲೀಗ್ ಇದಾಗಿರುವುದು ಹೆಮ್ಮೆಯ ವಿಷಯ‘ ಎಂದು ಪ್ರಶಾಂತ್ ರೆಡ್ಡಿ ತಿಳಿಸಿದರು. ಆಯೋಜಕರು ಪ್ರಶಸ್ತಿ ಮೊತ್ತವನ್ನು ₹ 1 ಕೋಟಿಯಿಂದ ₹ 60 ಲಕ್ಷಕ್ಕೆ ಕಡಿತಗೊಳಿಸಿ, ತಂಡಗಳ ಪರ್ಸ್‌ ಮೊತ್ತವನ್ನು ಹೆಚ್ಚಿಸಲು ಅವಕಾಶ ನೀಡಲಾಗಿದೆ. ಪ್ರತಿ ತಂಡದ ಪರ್ಸ್‌ ಮೊತ್ತವು ಹೋದ ವರ್ಷಕ್ಕಿಂತ ₹ 23 ಲಕ್ಷಗಳ ಏರಿಕೆ ಕಂಡಿವೆ. ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್, ಲಖನೌ, ಪುಣೆ, ನಾರ್ತ್‌ ಈಸ್ಟ್, ಮುಂಬೈ, ರಾಯಪುರ ಮತ್ತು ಕೊಚ್ಚಿ ತಂಡಗಳು ಕಣಕ್ಕಿಳಿಯಲಿವೆ. ಮೊದಲ ಆವೃತ್ತಿಯಲ್ಲಿ ಒಲಿಂಪಿಯನ್ ಆಟಗಾರರಾದ ಪಿ.ವಿ. ಸಿಂಧು, ಕೆ.ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ಸಾಯಿಪ್ರಣಿತ್, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಎಚ್‌.ಎಸ್. ಪ್ರಣಯ್ ಮತ್ತು ಜ್ವಾಲಾ ಗುಟ್ಟಾ ತಂಡಗಳ ಐಕಾನ್ ಆಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.