ಉದ್ದೀಪನ ಮದ್ದು ಸೇವನೆ: ಸಿಕ್ಕಿಬಿದ್ದ ಜುಡೊಕಾ ಸೈನಿ ನವದೆಹಲಿ: ಮುಂಬರಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಸಂಭವನೀಯರ ತಂಡದಲ್ಲಿದ್ದ ಜುಡೊ ಪಟು ಜಸ್ಲೀನ್ ಸಿಂಗ್ ಸೈನಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಹೋದ ತಿಂಗಳು ತೈಪೆ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಭಾಗವಹಿಸಿದ್ದಾಗ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಟೂರ್ನಿಯಲ್ಲಿ ಅವರು 66 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ‘ಅಂತರರಾಷ್ಟ್ರೀಯ ಏಜೆನ್ಸಿಯು ನಡೆಸಿದ ಪರೀಕ್ಷೆಯಲ್ಲಿ ಅವರು (ಜಸ್ಲೀನ್) ನಿಷೇಧಿತ ಮದ್ದು ಸೇವನೆ ಮಾಡಿರುವುದು ಪತ್ತೆಯಾಗಿದೆ. ಆದ್ದರಿಂದ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಿಲ್ಲ‘ ಎಂದು ತಂಡದ ತರಬೇತುದಾರರೊಬ್ಬರು ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಜುಡೊ ಫೆಡರೇಷನ್‌ ಟೂರ್ನಿಗಳಲ್ಲಿ ಅಂತರರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಐಟಿಎ) ಉದ್ದೀಪನ ಮದ್ದು ಪರೀಕ್ಷೆ ಮತ್ತು ಫಲಿತಾಂಶ ನಿರ್ವಹಣೆ ಮಾಡುತ್ತದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8ರವರೆಗೆ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಸಂಭವನೀಯರ ಪಟ್ಟಿಯನ್ನು ಈಚೆಗೆ ಪ್ರಕಟಿಸಲಾಗಿತ್ತು. ಅದರಲ್ಲಿ ಸೈನಿ ಕೂಡ ಇದ್ದರು. ಕಳೆದೆರಡು ತಿಂಗಳಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದ ಐದನೇ ಜುಡೊಕಾ ಇವರಾಗಿದ್ದರೆ. ಈ ಹಿಂದೆ ಹರ್ಷದೀಪ್ ಬ್ರಾರ್ (81ಕೆ.ಜಿ), ಗುಲಾಬ್ ಅಲಿ ಮೊಹಸಿನ್ (60 ಕೆ.ಜಿ), ರಾಹುಲ್ ಸೆವ್ತಾ (81 ಕೆ.ಜಿ) ಮತ್ತು ಅಕ್ಷಯ್ (66 ಕೆ.ಜಿ) ಸಿಕ್ಕಿಬಿದ್ದಿದ್ದರು. ಇವರು ಸ್ಪರ್ಧೆಯಿಂದ ಆಚೆ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ನಡೆಸಿದ್ದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.