ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಮಲೇಷ್ಯಾ ಮಣಿಸಿದ ಭಾರತ ಚೆನ್ನೈ (ಪಿಟಿಐ): ಆಕ್ರಮಣಕಾರಿ ಆಟವಾಡಿದ ಭಾರತ ತಂಡದವರು ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಪಂದ್ಯದಲ್ಲಿ 5–0 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದರು. ಮೇಯರ್‌ ರಾಧಾಕೃಷ್ಣನ್‌ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕಾರ್ತಿ ಸೆಲ್ವಂ (15ನೇ ನಿ.), ಹಾರ್ದಿಕ್‌ ಸಿಂಗ್‌ (32), ಹರ್ಮನ್‌ಪ್ರೀತ್‌ ಸಿಂಗ್‌ (42), ಗುರುಜಂತ್ ಸಿಂಗ್‌ (53) ಮತ್ತು ಜುಗ್ರಾಜ್ ಸಿಂಗ್‌ (54) ಅವರು ಆತಿಥೇಯ ತಂಡದ ಪರ ಗೋಲು ಗಳಿಸಿದರು. ಟೂರ್ನಿಯಲ್ಲಿ ಎರಡನೇ ಗೆಲುವು ಪಡೆದ ಭಾರತ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮೂರು ಪಂದ್ಯಗಳನ್ನು ಆಡಿರುವ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ ಏಳು ಪಾಯಿಂಟ್ಸ್‌ ಹೊಂದಿದೆ. ಮಲೇಷ್ಯಾ ಆರು ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಜಪಾನ್‌ ಎದುರು ನೀರಸ ಪ್ರದರ್ಶನ ನೀಡಿ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ತಂಡ, ಮಲೇಷ್ಯಾ ವಿರುದ್ಧ ಸ್ಪೂರ್ತಿಯುತ ಪ್ರದರ್ಶನ ನೀಡಿತು. ಮೂರು ಗೋಲುಗಳು ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಬಂದವು. ಭಾರತ ತಂಡ ಸೋಮವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಕೊರಿಯಾದ ಸವಾಲು ಎದುರಿಸಲಿದೆ. ಪಾಕ್–ಜಪಾನ್‌ ಪಂದ್ಯ ಡ್ರಾ: ಪಾಕಿಸ್ತಾನ ತಂಡ ಜಪಾನ್‌ ಜತೆ 3–3 ಗೋಲುಗಳ ಡ್ರಾ ಸಾಧಿಸಿತು. ಈ ಫಲಿತಾಂಶದಿಂದ ಉಭಯ ತಂಡಗಳೂ ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿವೆ. ಮೊದಲ ನಿಮಿಷದಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟದ ಮೊರೆ ಹೋದವು. ರಾಣಾ ಅಬ್ದುಲ್‌ ಅವರು 9ನೇ ನಿಮಿಷದಲ್ಲಿ ಪಾಕ್‌ಗೆ ಮುನ್ನಡೆ ತಂದಿತ್ತರೆ, ಜಪಾನ್‌ನ ಸೆರೆನ್‌ ತನಕಾ (13ನೇ) ಪಂದ್ಯವನ್ನು ಸಮಸ್ಥಿತಿಗೆ ತಂದರು. ಆ ಬಳಿಕ ಪಾಕ್‌ ತಂಡದ ಪರ ಮೊಹಮ್ಮದ್‌ ಖಾನ್‌ (25 ಮತ್ತು 55ನೇ ನಿ.) ಎರಡು ಗೋಲುಗಳನ್ನು ಗಳಿಸಿದರೆ, ಜಪಾನ್‌ ಪರ ಕಾಟೊ ರೊಸೆಯಿ (37) ಹಾಗೂ ಒಹಶಿ ಮಸಾಕಿ (45) ಅವರು ಚೆಂಡನ್ನು ಗುರಿ ಸೇರಿಸಿದರು. ಕೊನೆಯ ನಿಮಿಷಗಳಲ್ಲಿ ಉಭಯ ತಂಡಗಳು ಗೆಲುವಿನ ಗೋಲಿಗಾಗಿ ಮೇಲಿಂದ ಮೇಲೆ ಪ್ರಯತ್ನಿಸಿದರೂ, ಯಶಸ್ಸು ದೊರೆಯಲಿಲ್ಲ. ಡ್ರಾ ಪಂದ್ಯದಲ್ಲಿ ಕೊರಿಯಾ: ದಿನದ ಮತ್ತೊಂದು ಪಂದ್ಯದಲ್ಲಿ ಚೀನಾ ತಂಡ ಕೊರಿಯಾ ತಂಡವನ್ನು 1–1 ಗೋಲುಗಳ ಡ್ರಾದಲ್ಲಿ ಕಟ್ಟಿಹಾಕಿತು. ಜಾಂಗ್‌ಯುನ್‌ ಜಾಂಗ್ ಅವರು ಕೊರಿಯಾ ಪರ ಗೋಲು ಗಳಿಸಿದರೆ, ಚಾಂಗ್‌ಕಾಂಗ್‌ ಚೆನ್‌ ಅವರು ಚೀನಾ ಪರ ಚೆಂಡನ್ನು ಗುರಿ ಸೇರಿಸಿ ಸಮಬಲಕ್ಕೆ ಕಾರಣರಾದರು. ಇಂದಿನ ಪಂದ್ಯಗಳು: ಜಪಾನ್‌–ಮಲೇಷ್ಯಾ (ಸಂಜೆ 4), ಪಾಕಿಸ್ತಾನ– ಚೀನಾ (ಸಂಜೆ 6.15), ಭಾರತ– ಕೊರಿಯಾ (ರಾತ್ರಿ 8.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.