ಬಿಟಿಸಿ ಸ್ಥಳಾಂತರಕ್ಕೆ ಸರ್ಕಾರ ಪಟ್ಟು ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರು ಟರ್ಫ್‌ ಕ್ಲಬ್‌ ಮಾಸಿಕ ಪರವಾನಗಿ ನವೀಕರಣ ಮಾಡಲು ನಿರಾಕರಿಸಿದೆ. ಇದರಿಂದಾಗಿ ಬಿಟಿಸಿಯಲ್ಲಿ ನಡೆಯಬೇಕಿದ್ದ ರೇಸ್‌ಗಳು, ಆಫ್‌ಕೋರ್ಸ್ ಬೆಟ್ಟಿಂಗ್ ಚಟುವಟಿಕೆಗಳು ಸ್ಥಗಿತವಾಗಿದೆ. ಅದರಿಂದಾಗಿ ಕ್ಲಬ್‌ ಆಡಳಿತ ಸಮಿತಿಯು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಶುಕ್ರವಾರ ಭೇಟಿಯಾಗಿ, ಪರವಾನಗಿ ನವೀಕರಿಸುವಂತೆ ಮನವಿ ಮಾಡಿಕೊಂಡಿತು. ಆದರೆ ಈ ಸಭೆಯಲ್ಲಿ ಮುಖ್ಯಮಂತ್ರಿ ಅವರು, ‘ಸದ್ಯ ನಗರದ ಹೃದಯ ಭಾಗದಲ್ಲಿರುವ ಸ್ಥಳದಿಂದ ರೇಸ್‌ಕೋರ್ಸ್‌ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಮತ್ತು ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಹಿಂಪಡೆಯಬೇಕು’ ಎಂದು ಹೇಳಿದರೆನ್ನಲಾಗಿದೆ. ‘ಈ ವಿಷಯವು ಈಗ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ‘ ಎಂದು ಟರ್ಫ್‌ ಕ್ಲಬ್‌ನ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸದಸ್ಯರೊಬ್ಬರು ಹೇಳಿದ್ದಾರೆ. ‘ಮೊದಲು ಜಿಎಸ್‌ಟಿ ಮತ್ತು ಈಗ ಈ ಪ್ರಕರಣ. ಇದರಿಂದಾಗಿ ಪರಿಸ್ಥಿತಿಯು ಮಂಕಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಯಾವ ರೀತಿಯ ಬೆಳವಣಿಗಳು ನಡೆಯಲಿವೆ ನೋಡೋಣ‘ ಎಂದೂ ಅವರು ನುಡಿದರು. ರೇಸ್‌ಕೋರ್ಸ್ ಇರುವ ಬೆಲೆಬಾಳುವ ಆಸ್ತಿಗಾಗಿ ಕ್ಲಬ್ ಮತ್ತು ಸರ್ಕಾರದ ನಡುವಿನ ಜಿದ್ದಾಜಿದ್ದಿಯು ಐದು ದಶಕಗಳಿಂದ ನಡೆಯುತ್ತಿದೆ. ಆದರೆ ಈಗ ಸರ್ಕಾರದ ಪಟ್ಟಿನಿಂದಾಗಿ ಬಿಟಿಸಿಯ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ. ಈಗಾಗಲೇ ಜಿಎಸ್‌ಟಿಯಿಂದಾಗಿ ಅಪಾರ ನಷ್ಟದ ಭೀತಿಯಲ್ಲಿದೆ. ರೇಸಿಂಗ್ ಚಟುವಟಿಕೆಗಳು ಕುಂಠಿತವಾಗುತ್ತಿವೆ. ಆದ್ದರಿಂದ ಹಿಂದೆಂದಿಗಿಂತಲೂ ಹೆಚ್ಚು ಈಗ ಪೆಟ್ಟು ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. 2008 ರಲ್ಲಿ ಬಿ.ಎಸ್‌. ಯಡಿಯೂರಪ್ಪ ಸರ್ಕಾರವು ರೇಸ್‌ಕೋರ್ಸ್‌ ಅನ್ನು ಬೇರೆಡೆಗೆ ಸ್ಥಳಾಂತರ ಮಾಡುವುದಾಗಿ ಘೋಷಿಸಿತ್ತು. ಆದರೆ ಸ್ಥಳಾಂತರಕ್ಕೆ ವಿರೋಧಿಸಿ ಬಿಟಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಮೈಸೂರಿನ ಮಹಾರಾಜರು ಈ ಭೂಮಿಯನ್ನು ‘ಇನಾಮು‘ ಎಂದು ಕೊಟ್ಟಿದ್ದರು. ಈ ತಾಣದಲ್ಲಿ ಕುದುರೆ ರೇಸಿಂಗ್ ಮಾತ್ರ ನಡೆಸಬೇಕು ಎಂಬ ಷರತ್ತು ವಿಧಿಸಲಾಗಿತ್ತೆಂದು ಕೋರ್ಟ್‌ಗೆ ತಿಳಿಸಲಾಗಿತ್ತು ಎಂದು ಕ್ಲಬ್‌ನ ಸ್ಟೀವರ್ಡ್ ಒಬ್ಬರು ತಿಳಿಸಿದರು. ನಂತರದಲ್ಲಿ ಹೈಕೋರ್ಟ್‌ನಲ್ಲಿ ಬಿಟಿಸಿ ಪ್ರಕರಣದಲ್ಲಿ ಸೋತಿತು. ಆರು ತಿಂಗಳೊಳಗೇ ಜಾಗ ತೆರವುಗೊಳಿಸುವಂತೆ ಕೋರ್ಟ್ ಸೂಚಿಸಿತು. ಬಿಟಿಸಿಯು ಪ್ರಕರಣವನ್ನು ಸುಪ್ರೀಂ ಕೋರ್ಟ್‌ನವರೆಗೆ ಒಯ್ದಿತು. ‘ಬಿಟಿಸಿಯನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲು ನಮಗೆ ವಿರೋಧವಿಲ್ಲ. ವಾಸ್ತವವಾಗಿ, ಈ ಸ್ಥಳವು ಈಗ ಉತ್ತಮ ಸ್ಥಿತಿಯಲ್ಲಿ ಇಲ್ಲ. ಬೇರೆಡೆ ನಮಗೆ ಸೂಚಿಸಲಾಗುತ್ತಿರುವ ಪರ್ಯಾಯ ಸ್ಥಳಗಳು ಕ್ಲಬ್‌ ಸ್ಥಾಪನೆ ಮತ್ತು ನಿರ್ವಹಣೆಗೆ ಸೂಕ್ತವಾಗಿಲ್ಲ‘ ಎಂದು ಸೀನಿಯರ್ ಸ್ಟೀವರ್ಡ್ ಹೇಳಿದರು. ‘ಹೊಸ ರೇಸ್ ಟ್ರ್ಯಾಕ್ ನಿರ್ಮಾಣಕ್ಕೆ 3–4 ವರ್ಷಗಳು ಬೇಕಾಗಬಹುದು. ಇದೊಂದು ದೊಡ್ಡ ಯೋಜನೆಯಾಗಿದ್ದು ದೊಡ್ಡ ಹೂಡಿಕೆಯೂ ಆಗಬೇಕು. ಸದ್ಯದ ಕ್ಲಬ್ ನ ಆರ್ಥಿಕ ಪರಿಸ್ಥಿತಿಯು ಕಠಿಣವಾಗಿದೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸರ್ಕಾರವು ಬೆಂಬಲಿಸಿದರೆ ಸ್ಥಳಾಂತರಕ್ಕೆ ಅನುಕೂಲವಾಗಲಿದೆ‘ ಎಂದು ಮತ್ತೊಬ್ಬ ಸ್ಟಿವರ್ಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಟಿಸಿ ಆಡಳಿತ ಸಮಿತಿ, ಸರ್ಕಾರದ ನಾಮನಿರ್ದೇಶಿತ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಇನ್ನೊಂದು ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ ಎನ್ನಲಾಗಿದೆ. ಅದರ ನಂತರವೇ ಸ್ಪಷ್ಟ ಚಿತ್ರಣ ಲಭಿಸುವ ನಿರೀಕ್ಷೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.