ಪ್ಯಾರಾ ಬ್ಯಾಡ್ಮಿಂಟನ್‌: ಭಗತ್–ಕದಂ ಜೋಡಿಗೆ ಚಿನ್ನ ನವದೆಹಲಿ (ಪಿಟಿಐ): ಭಾರತದ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಂ ಜೋಡಿಯು ಇಂಗ್ಲೆಂಡ್‌ನಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್‌ ಅಂತರರಾಷ್ಟ್ರೀಯ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದೆ. ವಿಶ್ವದ ನಂ.1 ಜೋಡಿಯಾಗಿರುವ ಭಗತ್ ಮತ್ತು ಕದಂ ಅವರು ಎಸ್‌ಎಲ್‌ 3–ಎಸ್‌ಎಲ್‌ 4 ವರ್ಗದಲ್ಲಿ ಸ್ವದೇಶದ ದೀಪ್ ರಂಜನ್ ಬಿಸೋಯಿ ಮತ್ತು ಮನೋಜ್ ಸರ್ಕಾರ್ ಜೋಡಿಯನ್ನು 21-17, 21-17ರಿಂದ ಮಣಿಸಿದರು. ಭಗತ್ ಅವರು ಎಸ್‌ಎಲ್‌ 3 ವರ್ಗದ ಸಿಂಗಲ್ಸ್‌ನಲ್ಲಿ ಮತ್ತು ಮನೀಶಾ ರಾಮ್‌ದಾಸ್‌ ಅವರೊಂದಿಗೆ ಎಸ್ಎಲ್‌ 3– ಎಸ್‌ಯು 5 ವರ್ಗದ ಮಿಕ್ಸೆಡ್‌ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿಯ ಸಾಧನೆ ಮಾಡಿದ್ದಾರೆ. ಸಿಂಗಲ್ಸ್‌ನ ಫೈನಲ್‌ನಲ್ಲಿ ಭರತ್‌ ಅವರು ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ಅವರಿಗೆ 8–21, 10–21ರಿಂದ ಮಣಿದರು. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಭಾರತದ ಜೋಡಿಯು ಇಂಡೋನೇಷ್ಯಾದ ಹಿಕ್ಮತ್ ರಾಮ್ದಾನಿ ಮತ್ತು ಲಿಯಾನಿ ರಾಟ್ರಿ ಒಕ್ಟಿಲಾ ಅವರಿಗೆ 17–21, 17–21ರಿಂದ ಸೋತರು. ಸುಕಾಂತ್ ಕದಂ ಅವರು ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ವಿರುದ್ಧ 21-17, 15-21, 16-21ರಿಂದ ಸೋತು ಕಂಚು ಗೆದ್ದರು. ಎಸ್‌ಎಚ್‌6 ವರ್ಗದ ಸಿಂಗಲ್ಸ್‌ನಲ್ಲಿ ಭಾರತದ ಕೃಷ್ಣ ಸಾಗರ್‌, ಎಸ್‌ಎಲ್‌ 3– ಎಸ್‌ಯು 5 ವರ್ಗದ ಮಹಿಳೆಯರ ಡಬಲ್ಸ್‌ನಲ್ಲಿ ಮಾನಸಿ ಜೋಶಿ ಮತ್ತು ತುಳಸಿಮತಿ ಮುರುಗೇಶನ್ ಅವರು ಕ್ರಮವಾಗಿ ಚಿನ್ನ ಗೆದ್ದರು. ಎಸ್‌ಎಚ್‌ 6 ವರ್ಗದ ಮಹಿಳೆಯರ ಸಿಂಗಲ್ಸ್‌ನಲ್ಲಿ ನಿತ್ಯಶ್ರೀ ಅವರು ಬೆಳ್ಳಿಯ ಸಾಧನೆ ಮಾಡಿದರು. ಎಸ್‌ಎಲ್‌3–ಎಸ್‌ಎಲ್‌4 ವರ್ಗದ ಪುರುಷರ ಡಬಲ್ಸ್‌ನಲ್ಲಿ ರಂಜನ್ ಬಿಸೋಯಿ ಮತ್ತು ಮನೋಜ್ ಸರ್ಕಾರ್ ಜೋಡಿ ಬೆಳ್ಳಿ ಗೆದ್ದರೆ, ನಿತೇಶ್‌ ಮತ್ತು ತರುಣ್‌ ಜೋಡಿ ಕಂಚು ಪಡೆಯಿತು. ಎಸ್‌ಯು 5 ವರ್ಗದ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಚಿರಾಗ್‌ ಬರೆತಾ ಮತ್ತು ರಾಜ್ ಕುಮಾರ್ ಜೋಡಿ ಬೆಳ್ಳಿ ಪದಕ ಗೆದ್ದಿತು. ಎಸ್‌ಎಲ್‌ 3 ವರ್ಗದ ಸಿಂಗಲ್ಸ್‌ನಲ್ಲಿ ಕುಮಾರ್‌ ನಿತೇಶ್‌ ಕಂಚು, ಮಹಿಳೆಯರ ಡಬಲ್ಸ್‌ನಲ್ಲಿ ಮಾನಸಿ ಜೋಶಿ ಮತ್ತು ಮನ್‌ದೀಪ್‌ ಕೌರ್‌ ಕಂಚು ಗೆದ್ದರು. ಟೂರ್ನಿಯಲ್ಲಿ ಭಾರತದ ಆಟಗಾರರು 3 ಚಿನ್ನ, 5 ಬೆಳ್ಳಿ ಮತ್ತು 10 ಕಂಚಿನ ಪದಕವನ್ನು ಗೆದ್ದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.