ಹಾಕಿ: ಭಾರತ ತಂಡದ ಅಜೇಯ ಗೆಲುವಿನ ಓಟ ಚೆನ್ನೈ (ಪಿಟಿಐ): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಅಜೇಯ ಓಟ ಮುಂದುವರಿದಿದೆ. ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯರು 3–2 ಗೋಲುಗಳಿಂದ ಕೊರಿಯಾ ವಿರುದ್ಧ ಗೆದ್ದರು. ಈ ಜಯದ ಮೂಲಕ ನಾಲ್ಕು ಪಂದ್ಯಗಳಿಂದ 10 ಪಾಯಿಂಟ್ಸ್‌ಗಳೊಂದಿಗೆ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಮೂರು ಪಂದ್ಯಗಳನ್ನು ಗೆದ್ದಿರುವ ಆತಿಥೇಯರು, ಒಂದನ್ನು ಡ್ರಾ ಮಾಡಿಕೊಂಡಿದ್ದಾರೆ. ಚುರುಕಿನ ಆಟವಾಡಿದ ಭಾರತ ತಂಡಕ್ಕೆ ನೀಲಕಂಠ ಶರ್ಮಾ ಅವರು 6ನೇ ನಿಮಿಷದಲ್ಲಿ ಮುನ್ನಡೆ ತಂದಿತ್ತರು. ಆದರೆ ಕಿಮ್‌ ಸುಂಗ್‌ಹ್ಯೂನ್‌ 12ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಕೊರಿಯಾ ಪಂದ್ಯವನ್ನು ಸಮಸ್ಥಿತಿಗೆ ತಂದಿತು. ಎರಡನೇ ಕ್ವಾರ್ಟರ್‌ ಬಳಿಕ ಭಾರತ ತಂಡ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿತು. ಹರ್ಮನ್‌ಪ್ರೀತ್‌ ಸಿಂಗ್‌ (23ನೇ ನಿ.) ಅವರು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿ ಭಾರತಕ್ಕೆ 2–1 ಮುನ್ನಡೆ ತಂದಿತ್ತರು. ಮೂರನೇ ಕ್ವಾರ್ಟರ್‌ನಲ್ಲಿ ಮನ್‌ದೀಪ್‌ ಸಿಂಗ್‌ (33 ನೇ ನಿ.) ತಂಡದ ಮೂರನೇ ಗೋಲು ಗಳಿಸಿದರು. ಕೊನೆಯ ಕ್ವಾರ್ಟರ್‌ನಲ್ಲಿ ಮರುಹೋರಾಟ ನಡೆಸಿದ ಕೊರಿಯಾ ಪರ ಯಾಂಗ್‌ ಜಿಹುನ್ (58) ಅವರು ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು. ಬುಧವಾರ ನಡೆಯಲಿರುವ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಬಳಗ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ, ಮಲೇಷ್ಯಾ ತಂಡಗಳಿಗೆ ಜಯ: ದಿನದ ಇತರ ಪಂದ್ಯಗಳಲ್ಲಿ ಪಾಕಿಸ್ತಾನ 2–1 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿದರೆ, ಮಲೇಷ್ಯಾ 3–1 ರಿಂದ ಜಪಾನ್‌ ವಿರುದ್ಧ ಗೆದ್ದಿತು. ಮೊಹಮ್ಮದ್‌ ಖಾನ್‌ (20) ಮತ್ತು ಅಫ್ರಾಜ್‌ (39) ಅವರು ಪಾಕ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಚೀನಾ ತಂಡದ ಪರ ಗಾವೊ ಜೀಶೆಂಗ್‌ (33) ಗೋಲು ತಂದಿತ್ತರು. ಪಾಯಿಂಟ್ಸ್‌ಗಳ ಸಂಖ್ಯೆಯನ್ನು ಐದಕ್ಕೆ ಹೆಚ್ಚಿಸಿಕೊಂಡ ಪಾಕ್‌, ಸೆಮಿಫೈನಲ್‌ ಪ್ರವೇಶಿಸುವ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿದೆ. ಮೂರನೇ ಸೋಲು ಅನುಭವಿಸಿದ ಚೀನಾ (1 ಪಾಯಿಂಟ್) ಸೆಮಿ ‘ರೇಸ್‌’ನಿಂದ ಹೊರಬಿದ್ದಿತು. ಜಪಾನ್‌ ವಿರುದ್ಧ ಗೆದ್ದ ಮಲೇಷ್ಯಾ ತಂಡ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಈ ತಂಡ ನಾಲ್ಕು ಪಂದ್ಯಗಳಿಂದ 9 ಪಾಯಿಂಟ್ಸ್‌ ಕಲೆಹಾಕಿದೆ. ನಜ್ಮಿ ಜಝ್ಲಾನ್ (13), ಅಶ್ರನ್ ಹಂಸಾನಿ (37) ಮತ್ತು ಶೆಲೊ ಸಿಲ್ವೇರಿಯಸ್ (59) ಅವರು ಮಲೇಷ್ಯಾ ಪರ ಚೆಂಡನ್ನು ಗುರಿ ಸೇರಿಸಿದರು. ಹಲವು ಅವಕಾಶಗಳನ್ನು ಹಾಳುಮಾಡಿಕೊಂಡ ಜಪಾನ್‌ ತಂಡದ ಏಕೈಕ ಗೋಲನ್ನು ನಿವಾ ತಕುಮಾ (59) ತಂದಿತ್ತರು. ನಾಲ್ಕು ಪಂದ್ಯಗಳಿಂದ ಎರಡು ಪಾಯಿಂಟ್ಸ್‌ ಕಲೆಹಾಕಿರುವ ಜಪಾನ್‌ ತಂಡದ ಸೆಮಿಫೈನಲ್‌ ಪ್ರವೇಶದ ಸಾಧ್ಯತೆ ಕ್ಷೀಣಿಸಿದೆ. ಕಳೆದ ಪಂದ್ಯದಲ್ಲಿ ಭಾರತದ ಎದುರು 0–5 ಗೋಲುಗಳಿಂದ ಸೋತಿದ್ದ ಮಲೇಷ್ಯಾ ತಂಡದವರು ಜಪಾನ್‌ ವಿರುದ್ಧ ಪುಟಿದೆದ್ದು ನಿಲ್ಲುವಲ್ಲಿ ಯಶಸ್ವಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.