ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌: ಪುರುಷರ ತಂಡಕ್ಕೆ ಕಂಚಿನ ಪದಕ ಬಾಕು (ಅಜರ್‌ಬೈಜಾನ್‌): ಭಾರತದ ಗುರಿಕಾರರು ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಗುರುವಾರ ಸ್ಫೂರ್ತಿದಾಯಕ ಪ್ರದರ್ಶನ ನೀಡಲು ವಿಫಲರಾದರು. ಆರು ಪಿಸ್ತೂಲ್‌ ಶೂಟರ್‌ಗಳಲ್ಲಿ ಯಾರಿಗೂ 2024ರ ಪ್ಯಾರಿಸ್‌ ಒಲಿಂಪಿಕ್‌ ಕೋಟಾದಡಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. 10 ಮೀ. ಏರ್‌ ಪಿಸ್ತೂಲ್‌ ಟೀಮ್‌ ಸ್ಪರ್ಧೆಯಲ್ಲಿ ಭಾರತ ಪುರುಷರ ತಂಡ ಕಂಚಿನ ಪದಕ ಗೆದ್ದುಕೊಂಡಿದ್ದಷ್ಟೇ ಸಮಾಧಾನದ ವಿಷಯವಾಯಿತು. ಶಿವ ನರ್ವಾಲ್‌ (579 ಪಾಯಿಂಟ್‌), ಸರಬಜೋತ್‌ ಸಿಂಗ್‌ (578), ಅರ್ಜುನ್‌ ಸಿಂಗ್‌ ಚೀಮಾ (577) ಅವರನ್ನೊಳಗೊಂಡ ತಂಡ ಒಟ್ಟು 1734 ಪಾಯಿಂಟ್‌ ಗಳಿಸಿ ಕಂಚಿನ ಪದಕ ಪಡೆಯಿತು. ಚೀನಾ ತಂಡ (1749 ಪಾಯಿಂಟ್‌) ಚಿನ್ನದ ಪದಕ ಪಡೆದರೆ, ಜರ್ಮನಿ ತಂಡ (1743) ಬೆಳ್ಳಿಯ ಪದಕ ಪಡೆಯಿತು. ಚೀನಾ ಮೇಲುಗೈ: ಮೊದಲ ದಿನ ಪಣಕ್ಕಿದ್ದ ಎಲ್ಲ ನಾಲ್ಕೂ ಚಿನ್ನದ ಪದಕಗಳು ಚೀನಾ ಪಾಲಾದವು. ವೈಯಕ್ತಿಕ 10 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳ ಸಾಧನೆ ನಿರಾಶೆ ಮೂಡಿಸಿತು. ಯಾರೊಬ್ಬರೂ ಎಂಟು ಆಟಗಾರರ ಫೈನಲ್‌ನಲ್ಲಿ ಸ್ಥಾನ ಪಡೆಯುವಂಥ ಪ್ರದರ್ಶನ ನೀಡಲಿಲ್ಲ. ನರ್ವಾಲ್‌ (579) ಅರ್ಹತಾ ಸುತ್ತಿನ ನಂತರ 17ನೇ ಸ್ಥಾನ ಪಡೆದರೆ, ಸರಬ್‌ಜೋತ್‌ (578) 18ನೇ ಸ್ಥಾನ ಗಳಿಸಿದರು. ಚೀಮಾ (577) 26ನೇ ಸ್ಥಾನಕ್ಕೆ ಸರಿದರು. ವೈಯಕ್ತಿಕ ವಿಭಾಗದ ಚಿನ್ನದ ಪದಕ ಚೀನಾದ ಝಾಂಗ್‌ ಬೊವೆನ್‌ (244.3) ಅವರಿಗೆ ಒಲಿಯಿತು. ಸರ್ಬಿಯಾದ ದಮಿರ್‌ ಮಿಕೆಕ್ (240.8) ಬೆಳ್ಳಿ ಹಾಗೂ ಬಲ್ಗೇರಿಯಾದ ಕಿರಿಲ್‌ ಕಿರೋವ್ (215.7) ಕಂಚಿನ ಪದಕಗಳನ್ನು ಪಡೆದರು. ಭಾರತ ಮಹಿಳೆಯರ ಸಾಧನೆಯೂ ಕಳಪೆಯಾಗಿತ್ತು. ಇಶಾ ಸಿಂಗ್‌ (572), ಪಲಕ್‌ (570) ಮತ್ತು ದಿವ್ಯಾ ಟಿ.ಎಸ್‌. ಅವರನ್ನೊಳಗೊಂಡ ತಂಡ ಟೀಮ್‌ ವಿಭಾಗದಲ್ಲಿ 11ನೇ ಸ್ಥಾನ ಪಡೆಯಿತು. ಚೀನಾ, ಹಂಗೆರಿ, ಇರಾನ್ ತಂಡಗಳು ಕ್ರಮವಾಗಿ ಸ್ವರ್ಣ, ರಜತ ಮತ್ತು ಕಂಚಿನ ಪದಕ ಪಡೆದವು. ವೈಯಕ್ತಿಕ ವಿಭಾಗದಲ್ಲಿ ಇಶಾ 32ನೇ ಸ್ಥಾನ, ಪಲಕ್‌ 40ನೇ ಸ್ಥಾನ ಮತ್ತು ದಿವ್ಯಾ 66ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ಚೀನಾದ ಜಿಯಾಂಗ್‌ ರಾಂಕ್ಸಿನ್‌ ಚಿನ್ನ ಗೆದ್ದರೆ, ಗ್ರೀಸ್‌ನ ಅನ್ನಾ ಕೊರಕಾಕಿ ಮತ್ತು ಚೀನಾದ ಲಿ ಕ್ಸು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾಣ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.