ವಿಶ್ವಕಪ್‌ ಆರ್ಚರಿ: ಭಾರತ ತಂಡಗಳಿಗೆ ಕಂಚು ‍ಪ್ಯಾರಿಸ್‌: ಭಾರತದ ರೀಕರ್ವ್‌ ಆರ್ಚರಿ ಸ್ಪರ್ಧಿಗಳು ವಿಶ್ವ ಕಪ್‌ ಸ್ಟೇಜ್‌ 4 ಟೂರ್ನಿಯ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಗುರುವಾರ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಧೀರಜ್ ಬೊಮ್ಮದೇವರ, ಅತನು ದಾಸ್‌ ಮತ್ತು ತುಷಾರ್‌ ಶೆಲ್ಕೆ ಅವರನ್ನೊಳಗೊಂಡ ತಂಡ 6–2 ರಿಂದ (54–56, 57–75, 56–54, 57–55) ಸ್ಪೇನ್‌ ತಂಡವನ್ನು (ಆಂಡ್ರೆಜ್ ಟೆಮಿನೊ, ಯುನ್‌ ಸ್ಯಾಂಚೆಸ್‌ ಮತ್ತು ಪಾಬ್ಲೊ ಆಚ) ಸೋಲಿಸಿತು. ಎರಡನೇ ಶ್ರೇಯಾಂಕ ಪಡೆದಿದ್ದ ಭಾರತದ ಪುರುಷರ ತಂಡ, ಸೆಮಿಫೈನಲ್‌ನಲ್ಲಿ ಚೀನಾ ತೈಪೆ ವಿರುದ್ಧ 0–6ರಿಂದ ಸೋಲನುಭವಿಸಿತ್ತು. ಅಂಕಿತಾ ಭಕ್ತ, ಭಜನ್ ಕೌರ್‌ ಮತ್ತು ಸಿಮ್ರನಜಿತ್‌ ಕೌರ್ ಅವರನ್ನು ಒಳಗೊಂಡಿದ್ದ ಮಹಿಳಾ ತಂಡವೂ ಸೆಮಿಫೈನಲ್‌ನಲ್ಲಿ ಚೀನಾ ತೈಪೆ ತಂಡಕ್ಕೆ 0–6 ರಿಂದ ಮಣಿದಿತ್ತು. ಕಂಚಿನ ಪದಕಕ್ಕಾಗಿ ನಡೆದ ಪ್ಲೇಆಫ್‌ನಲ್ಲಿ ಭಾರತ ವನಿತಾ ತಂಡ ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡು 5–4 ರಿಂದ ಮೆಕ್ಸಿಕೊ ಎದುರು ಜಯಗಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.