ಸಿಂಧು, ಸಾತ್ವಿಕ್‌– ಚಿರಾಗ್‌ ಜೋಡಿಗೆ ‘ಬೈ’ ಕ್ವಾಲಾಲಂಪುರ: ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ‘ಬೈ’ ‍ಪಡೆದಿದ್ದಾರೆ. ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ ಆ.21ರಿಂದ 27ರವರೆಗೆ ಟೂರ್ನಿ ನಡೆಯಲಿದೆ. ಮೊದಲ ಸುತ್ತಿನ ಪಂದ್ಯಗಳ ‘ಡ್ರಾ’ ಎತ್ತುವ ಸಮಾರಂಭ ಗುರುವಾರ ನಡೆಯಿತು. ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಅವರು 2019ರಲ್ಲಿ ಚಾಂಪಿಯನ್‌ ಆಗಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತರಾದ ಭಾರತದ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ ಎರಡನೇ ‍ಸ್ಥಾನ ಪಡೆದಿದೆ. ಕಳೆದ ತಿಂಗಳು ಕೊರಿಯಾ ಓಪನ್‌ನಲ್ಲಿ ಚಾಂಪಿಯನ್‌ ಆದ ಬಳಿಕ ವೃತ್ತಿಜೀವನದ ಅತ್ಯುತ್ತಮ ಕ್ರಮಾಂಕ ಪಡೆದಿದೆ. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲನ್ನು ಎರಡನೇ ಶ್ರೇಯಾಂಕದ ಎಚ್‌.ಎಸ್‌. ಪ್ರಣಯ್‌ ಮುನ್ನಡೆಸಲಿದ್ದು, ಅವರು ಮೊದಲ ಸುತ್ತಿನಲ್ಲಿ ಫಿನ್ಲೆಂಡ್‌ನ ಕಾಲೆ ಕೊಲ್ಜೊನೆನ್ ಅವರ ಸವಾಲನ್ನು ಎದುರಿಸುವರು. ವರ್ಷದಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ಪ್ರಣಯ್‌, ಪ್ರಸ್ತುತ ವಿಶ್ವದ 9ನೇ ರ‍್ಯಾಂಕ್‌ ಪಡೆದಿದ್ದಾರೆ. ಅವರು ಈ ಋತುವಿನಲ್ಲಿ ಮಲೇಷ್ಯಾ ಮಾಸ್ಟರ್ಸ್‌ ಚಾಂಪಿಯನ್‌ ಮತ್ತು ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು. ಭಾರತದ ಲಕ್ಷ್ಯ ಸೇನ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರು ಸಿಂಗಲ್ಸ್‌ನ ಮೊದಲ ರೌಂಡ್‌ನಲ್ಲಿ ಕ್ರಮವಾಗಿ ಮಾರಿಷಸ್‌ನ ಜಾರ್ಜಸ್ ಜೂಲಿಯನ್ ಪಾಲ್ ಮತ್ತು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಎದುರಿಸುವರು. ಪುರುಷರ ಸಿಂಗಲ್ಸ್‌ನಲ್ಲಿ 66, ಮಹಿಳಾ ಸಿಂಗಲ್ಸ್‌ನಲ್ಲಿ 48 ಮಂದಿ ಭಾಗವಹಿಸಲಿದ್ದಾರೆ. ಮೂರು ವಿಭಾಗದ ಡಬಲ್ಸ್ ಸ್ಪರ್ಧೆಗಳಲ್ಲಿ ತಲಾ 46 ತಂಡಗಳು ಪಾಲ್ಗೊಳ್ಳಲಿವೆ. ಸಿಂಗಲ್ಸ್‌ ಸ್ಪರ್ಧೆಯಲ್ಲಿ ನಾಲ್ವರು ಮತ್ತು ಡಬಲ್ಸ್‌ ಸ್ಪರ್ಧೆಯಲ್ಲಿ 6 ಜೋಡಿ ಭಾರತವನ್ನು ಪ್ರತಿನಿಧಿಸುವರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಈವರೆಗೆ 13 ಪದಕಗಳನ್ನು ಗೆದ್ದಿದೆ. - ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.