ಚೆಸ್‌: ನಕಾಮುರಗೆ ಆಘಾತ ನೀಡಿದ ಪ್ರಜ್ಞಾನಂದ ಬಾಕು (ಅಜರ್‌ಬೈಜಾನ್): ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕಪ್‌ ಚೆಸ್‌ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಅಮೆರಿಕದ ಹಿಕಾರು ನಕಾಮುರ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದಿದ್ದ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಇಬ್ಬರೂ ಸಮಬಲ ಸಾಧಿಸಿದ್ದರು. ಆದರೆ ಶುಕ್ರವಾರ ನಡೆದ ಎರಡೂ ರ್‍ಯಾಪಿಡ್‌ ಟೈಬ್ರೇಕ್‌ ಪಂದ್ಯಗಳನ್ನು ಜಯಿಸಿದ ಪ್ರಜ್ಞಾನಂದ, ಪ್ರಶಸ್ತಿ ಗೆಲ್ಲುವ ‘ಫೇವರಿಟ್‌’ ಎನಿಸಿಕೊಂಡಿದ್ದ ನಕಾಮುರ ಅವರನ್ನು ಟೂರ್ನಿಯಿಂದ ಹೊರದಬ್ಬಿದರು. 18 ವರ್ಷದ ಪ್ರಜ್ಞಾನಂದ ಮುಂದಿನ ಪಂದ್ಯದಲ್ಲಿ ಹಂಗರಿಯ ಗ್ರ್ಯಾಂಡ್‌ಮಾಸ್ಟರ್‌ ಫೆರೆನ್ಸ್‌ ಬರ್ಕ್ಸ್ ಅವರ ಸವಾಲನ್ನು ಎದುರಿಸುವರು. ಡಿ.ಗುಕೇಶ್‌ ಅವರು ರಷ್ಯಾದ ಆಂಡ್ರೆ ಎಸಿಪೆಂಕೊ ವಿರುದ್ಧ ಗೆದ್ದು ಮುಂದಿನ ಹಂತಕ್ಕೆ ಲಗ್ಗೆಯಿಟ್ಟರು. ಆದರೆ ಭಾರತದ ಇನ್ನೊಬ್ಬ ಸ್ಪರ್ಧಿ ನಿಹಾಲ್‌ ಸರೀನ್‌ ಅವರ ಸವಾಲಿಗೆ ತೆರೆಬಿತ್ತು. ನಾಲ್ಕನೇ ಸುತ್ತಿನಲ್ಲಿ ಅವರು ಇಯಾನ್‌ ನೆಪೊಮ್‌ನಿಷಿ ವಿರುದ್ದದ ಎರಡೂ ರ್‍ಯಾಪಿಡ್‌ ಟೈಬ್ರೇಕ್‌ ಪಂದ್ಯಗಳಲ್ಲಿ ಸೋತರು. ವಿದಿತ್‌ ಗುಜರಾತಿ ಮತ್ತು ಅರ್ಜುನ್‌ ಇರಿಗೇಶಿ ಅವರು ಈಗಾಗಲೇ 16ರ ಘಟ್ಟ ಪ್ರವೇಶಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಎಲೈನ್‌ ರೋಬರ್ಸ್ ವಿರುದ್ದದ ಎರಡೂ ರ್‍ಯಾಪಿಡ್‌ ಟೈಬ್ರೇಕ್‌ ಪಂದ್ಯಗಳನ್ನು ಗೆದ್ದುಕೊಂಡ ಡಿ.ಹಾರಿಕಾ ಅವರು ಮುಂದಿನ ಸುತ್ತು ಪ್ರವೇಶಿಸಿದರು. ಆದರೆ ಕೋನೇರು ಹಂಪಿ ಅವರ ಸವಾಲಿಗೆ ತೆರೆಬಿತ್ತು. ಜಾರ್ಜಿಯದ ಬೆಲಾ ಕೊತೆನಶ್ವಿಲಿ ವಿರುದ್ಧದ ಎರಡೂ ರ‍್ಯಾಪಿಡ್‌ ಪಂದ್ಯಗಳನ್ನು ಅವರು ಸೋತರು. ಗುರುವಾರ ನಡೆದಿದ್ದ ಎರಡು ಪಂದ್ಯಗಳ ಬಳಿಕ ಇಬ್ಬರೂ ತಲಾ ಒಂದು ಗೆಲುವಿನೊಂದಿಗೆ 1–1 ರಿಂದ ಸಮಬಲ ಸಾಧಿಸಿದ್ದರು. ಇದೀಗ ಮಹಿಳೆಯರ ವಿಭಾಗದಲ್ಲಿ ಕಣದಲ್ಲಿ ಕಣದಲ್ಲಿರುವ ಭಾರತದ ಸ್ಪರ್ಧಿ ಹಾರಿಕಾ ಮಾತ್ರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.