ಹಾಕಿ: ಪ್ರಶಸ್ತಿಗೆ ಭಾರತ– ಮಲೇಷ್ಯಾ ಸೆಣಸು ಚೆನ್ನೈ (ಪಿಟಿಐ): ಆಕ್ರಮಣ ಮತ್ತು ವೇಗದ ಆಟದ ಮೂಲಕ ಜಪಾನ್‌ ತಂಡವನ್ನು ನಿಬ್ಬೆರಗಾಗಿಸಿದ ಭಾರತ ತಂಡ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ ಪ್ರವೇಶಿಸಿತು. ಮೇಯರ್‌ ರಾಧಾಕೃಷ್ಣನ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯವನ್ನು ಹರ್ಮನ್‌ಪ್ರೀತ್‌ ಸಿಂಗ್‌ ಬಳಗ 5–0 ಗೋಲುಗಳಿಂದ ಗೆದ್ದುಕೊಂಡಿತು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಆತಿಥೇಯರು, ಮಲೇಷ್ಯಾ ತಂಡದ ಸವಾಲು ಎದುರಿಸಲಿದ್ದಾರೆ. ಆಕಾಶ್‌ದೀಪ್‌ ಸಿಂಗ್‌ (19ನೇ ನಿ.), ಹರ್ಮನ್‌ಪ್ರೀತ್‌ ಸಿಂಗ್‌ (23ನೇ ನಿ.), ಮನ್‌ದೀಪ್‌ ಸಿಂಗ್ (30ನೇ ನಿ.), ಸುಮಿತ್‌ (39ನೇ ನಿ.) ಮತ್ತು ಕಾರ್ತಿ ಸೆಲ್ವಂ (51ನೇ ನಿ.) ಅವರು ಭಾರತದ ಪರ ಗೋಲು ಗಳಿಸಿದರು. ಲೀಗ್‌ ಹಂತದಲ್ಲಿ ಭಾರತ ತಂಡವನ್ನು 1–1ರಿಂದ ಕಟ್ಟಿಹಾಕಿದ್ದ ಜಪಾನ್‌, ಶುಕ್ರವಾರ ಯಾವುದೇ ಪೈಪೋಟಿ ನೀಡದೆಯೇ ಶರಣಾಯಿತು. ಮೂರು ಬಾರಿ ಚಾಂಪಿಯನ್‌ ಅಗಿರುವ ಭಾರತ, ನಾಲ್ಕನೇ ಸಲ ಫೈನಲ್‌ ಪ್ರವೇಶಿಸಿದೆ. ಮೊದಲ ಕ್ವಾರ್ಟರ್‌ನಲ್ಲಿ ಜಪಾನ್‌ ತಂಡದ ರಕ್ಷಣಾ ಆಟಗಾರರು ಮಿಂಚಿನ ಪ್ರದರ್ಶನ ನೀಡಿದ್ದರಿಂದ ಆತಿಥೇಯರಿಗೆ ಗೋಲು ಗಳಿಸಲು ಆಗಲಿಲ್ಲ. ಗೋಲಿನ ಖಾತೆ ತೆರೆಯಲು 19ನೇ ನಿಮಿಷದವರೆಗೆ ಕಾಯಬೇಕಾಯಿತು. ಅಕಾಶ್‌ದೀಪ್‌ ಸಿಂಗ್‌, ಫೀಲ್ಡ್‌ ಗೋಲು ಮೂಲಕ ಮುನ್ನಡೆ ತಂದಿತ್ತರು. ಹಾರ್ದಿಕ್‌ ಸಿಂಗ್ ನೀಡಿದ ಪಾಸ್‌ನಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದರು. ಇದಾದ ನಾಲ್ಕು ನಿಮಿಷಗಳ ಬಳಿಕ ಹರ್ಮನ್‌ಪ್ರೀತ್‌, ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಮೊದಲಾರ್ಧ ಕೊನೆಗೊಳ್ಳಲು ಕೆಲವೇ ಸೆಕೆಂಡುಗಳ ಇದ್ದಾಗ ಮನ್‌ದೀಪ್‌ ಸಿಂಗ್‌ ಅವರು ಮನ್‌ಪ್ರೀತ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ಸೊಗಸಾದ ರೀತಿಯಲ್ಲಿ ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ದ್ವಿತೀಯಾರ್ಧದದಲ್ಲೂ ಅದೇ ವೇಗ ಕಾಪಾಡಿಕೊಂಡ ಭಾರತ, ಮತ್ತೆರಡು ಗೋಲುಗಳನ್ನು ಗಳಿಸಿತು. ಫೈನಲ್‌ಗೆ ಮಲೇಷ್ಯಾ: ದಿನದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಹೊಂದಾಣಿಕೆಯ ಆಟವಾಡಿದ ಮಲೇಷ್ಯಾ 6–2 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತು ತಲುಪಿತು. ಮಲೇಷ್ಯಾ ತಂಡದ ಪರ ಶೆಲ್ಲೊ ಸಿಲ್ವೇರಿಯಸ್‌ (47 ಮತ್ತು 48ನೇ ನಿ.) ಹಾಗೂ ನಜ್ಮಿ ಜಝ್ಲಾನ್ (9 ಮತ್ತು 21ನೇ ನಿ.) ತಲಾ ಎರಡು ಗೋಲುಗಳನ್ನು ತಂದಿತ್ತರು. ಫೈಜಲ್‌ ಸಾರಿ (19) ಮತ್ತು ಅಬು ಕಮಲ್ ಅಝ್ರಾಯ್ (3) ಅವರು ತಲಾ ಒಂದು ಗೋಲು ಗಳಿಸಿದರು. ಕೊರಿಯಾ ತಂಡದ ಪರ ವೂ ಚೆಯೊನ್ ಜಿ (2) ಮತ್ತು ಜಾಂಗ್‌ಹ್ಯೂನ್‌ (14) ಅವರು ಚೆಂಡನ್ನು ಗುರಿ ಸೇರಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಎದುರಾಳಿಗೆ ತಕ್ಕ ಪೈಪೋಟಿ ನೀಡಿದ ಕೊರಿಯಾ, ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು. ಎರಡನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿದ ಕೊರಿಯಾ ಎದುರಾಳಿಗಳಿಗೆ ಅಚ್ಚರಿ ಉಂಟುಮಾಡಿತಾದರೂ, ಮುಂದಿನ ನಿಮಿಷದಲ್ಲೇ ಮಲೇಷ್ಯಾ ಸಮಬಲ ಸಾಧಿಸಿತು. ಆ ಬಳಿಕ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದ್ದರಿಂದ ಮೊದಲ ಕ್ವಾರ್ಟರ್‌ ಕೊನೆಗೊಂಡಾಗ ಪಂದ್ಯ 2–2 ರಿಂದ ಸಮಬಲದಲ್ಲಿತ್ತು. ಅನಂತರ ಮಲೇಷ್ಯಾ ತಂಡ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿ ಫೈನಲ್‌ಗೆ ಮುನ್ನಡೆಯಿತು. ಪಾಕಿಸ್ತಾನಕ್ಕೆ ಐದನೇ ಸ್ಥಾನ: ಐದು ಮತ್ತು ಆರನೇ ಸ್ಥಾನಗಳನ್ನು ನಿರ್ಣಯಿಸಲು ನಡೆದ ಪಂದ್ಯದಲ್ಲಿ ಪಾಕಿಸ್ತಾನ 6–1 ಗೋಲುಗಳಿಂದ ಚೀನಾ ತಂಡವನ್ನು ಪರಾಭವಗೊಳಿಸಿತು. ಮುಹಮ್ಮದ್ ಖಾನ್ ಮತ್ತು ಮುಹಮ್ಮದ್‌ ಅಮ್ಮಾದ್‌ ಅವರು ತಲಾ ಎರಡು ಗೋಲುಗಳನ್ನು ಗಳಿಸಿ ಪಾಕ್‌ ತಂಡದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತರ ಗೋಲುಗಳನ್ನು ಅಬ್ದುಲ್‌ ಶಾಹಿದ್‌ ಹಾಗೂ ಅಬ್ದುಲ್‌ ರಾಣಾ ತಂದಿತ್ತರು. ಚೀನಾ ತಂಡದ ಏಕೈಕ ಗೋಲನ್ನು ಬೆನಾಯ್ ಚೆನ್‌ ಗಳಿಸಿದರು. ಪಾಕಿಸ್ತಾನ ತಂಡವು ಮುಂಬರುವ ಜೂನಿಯರ್‌ ವಿಶ್ವಕಪ್‌ನಲ್ಲಿ ಆಡಲಿರುವ ಹೆಚ್ಚಿನ ಆಟಗಾರರಿಗೆ ಈ ಟೂರ್ನಿಯಲ್ಲಿ ಅವಕಾಶ ನೀಡಿತ್ತು. ಹಾಂಗ್‌ಝೌ ಏಷ್ಯನ್‌ ಗೇಮ್ಸ್‌ಗೆ ಸಿದ್ದ‌‌ತೆ ನಡೆಸುವ ಉದ್ದೇಶದಿಂದ ಸೀನಿಯರ್‌ ಆಟಗಾರರು ಇಲ್ಲಿ ಪಾಲ್ಗೊಂಡಿಲ್ಲ. ಇಂದಿನ ಪಂದ್ಯಗಳು: 3/4ನೇ ಸ್ಥಾನ: ಜಪಾನ್‌– ದಕ್ಷಿಣ ಕೊರಿಯಾ (ಸಂಜೆ 6) ಫೈನಲ್‌: ಭಾರತ– ಮಲೇಷ್ಯಾ (ರಾತ್ರಿ 8.30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.