ವಿಶ್ವ ಅಥ್ಲೆಟಿಕ್ಸ್‌: ಸಂತೋಷ್‌, ಸರ್ವೇಶ್‌ಗೆ ನಿರಾಸೆ ಬುಡಾಪೆಸ್ಟ್‌: ಭಾರತದ ಸಂತೋಷ್‌ ಕುಮಾರ್‌ ತಮಿಳರಸನ್‌ ಮತ್ತು ಸರ್ವೇಶ್‌ ಅನಿಲ್‌ ಕುಶಾರೆ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆ ಅನುಭವಿಸಿದರು. ಭಾನುವಾರ ನಡೆದ 400 ಮೀ. ಹರ್ಡಲ್ಸ್‌ ಸ್ಪರ್ಧೆಯ ಮೂರನೇ ಹೀಟ್ಸ್‌ನಲ್ಲಿ ಓಡಿದ ಸಂತೋಷ್‌, ಏಳನೇ ಸ್ಥಾನ ಪಡೆದು ಸೆಮಿಫೈನಲ್‌ ಪ್ರವೇಶಿಸಲು ವಿಫಲರಾದರು. ಅವರು 50.46 ಸೆಕೆಂಡುಗಳೊಂದಿಗೆ ಗುರಿ ತಲುಪಿದರು. ಹೈಜಂಪ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಸರ್ವೇಶ್‌, ತಮ್ಮ ಮೂರು ಪ್ರಯತ್ನಗಳಲ್ಲಿ 2.25 ಮೀ. ದಾಟಲು ವಿಫಲರಾದರು. ಅರ್ಹತಾ ಹಂತದ ‘ಬಿ’ ಗುಂಪಿನಲ್ಲಿ 11ನೇ ಹಾಗೂ ಒಟ್ಟಾರೆಯಾಗಿ 20ನೇ ಸ್ಥಾನ ಪಡೆದರು. 2.30 ಮೀ. ಸಾಧನೆ ಮಾಡಿದವರು ಅಥವಾ ಅರ್ಹತಾ ಸುತ್ತಿನಲ್ಲಿ ಅಗ್ರ 12 ಸ್ಥಾನಗಳನ್ನು ಪಡೆದ ಸ್ಪರ್ಧಿಗಳು ಫೈನಲ್‌ಗೆ ಪ್ರವೇಶಿಸಿದರು. ಕೂಟದ ಮೊದಲ ದಿನವೂ ಭಾರತದ ಅಥ್ಲೀಟ್‌ಗಳಿಗೆ ನಿರಾಸೆ ಎದುರಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.