ವಿಶ್ವಕಪ್‌ ಚೆಸ್‌ ಟೂರ್ನಿ: ಕಾರ್ಲ್‌ಸನ್‌ಗೆ ಮಣಿದ ಗುಕೇಶ್ ಬಾಕು, ಅಜರ್‌ಬೈಜಾನ್): ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್ ಅವರು ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಹಣಾಹಣಿಯ ಮೊದಲ ಪಂದ್ಯದಲ್ಲಿ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಎದುರು ಸೋತರು. ಕಪ್ಪು ಕಾಯಿಗಳೊಂದಿಗೆ ಆಡಿದ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಕಾರ್ಲ್‌ಸನ್‌, ‘ಎಂಡ್‌ ಗೇಮ್‌’ನಲ್ಲಿ ಚಾಣಾಕ್ಷತನ ತೋರಿ 17 ವರ್ಷದ ಗುಕೇಶ್‌ ಅವರನ್ನು ಮಣಿಸಿ 1–0 ಯಿಂದ ಮುನ್ನಡೆ ಸಾಧಿಸಿದರು. ಸೆಮಿಫೈನಲ್‌ ಪ್ರವೇಶದ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಗುಕೇಶ್‌ ಅವರು ಬುಧವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕು. ಕಾರ್ಲ್‌ಸನ್‌ ಅವರು ಡ್ರಾ ಮಾಡಿಕೊಂಡರೂ ಸೆಮಿ ಪ್ರವೇಶಿಸಲಿದ್ದಾರೆ. ಒಂದು ವೇಳೆ ಗುಕೇಶ್‌ ಗೆದ್ದರೆ, ಟೈಬ್ರೇಕರ್‌ನಲ್ಲಿ ವಿಜೇತರನ್ನು ನಿರ್ಣಯಿಸಲಾಗುತ್ತದೆ. ಭಾರತದ ಇಬ್ಬರು ಗ್ರ್ಯಾಂಡ್‌ಮಾಸ್ಟರ್‌ಗಳ ನಡುವಣ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ 19 ವರ್ಷದ ಅರ್ಜುನ್‌ ಇರಿಗೇಶಿ ಅವರು 53 ನಡೆಗಳಲ್ಲಿ ಆರ್‌.ಪ್ರಜ್ಞಾನಂದ ಅವರನ್ನು ಮಣಿಸಿದರು. ಕಪ್ಪು ಕಾಯಿಗಳೊಂದಿಗೆ ಆಡಿದ ಅರ್ಜುನ್‌, ಚತುರ ನಡೆಗಳ ಮೂಲಕ ಮೇಲುಗೈ ಸಾಧಿಸಿದರು. ಕ್ವಾರ್ಟರ್‌ಫೈನಲ್‌ ಪ್ರವೇಶಿಸಿರುವ ಭಾರತದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್‌ ವಿದಿತ್‌ ಸಂತೋಷ್‌ ಗುಜರಾತಿ ಅವರು ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ವಿರುದ್ಧ ಆಡಲಿದ್ದಾರೆ. ಫ್ಯಾಬಿಯಾನೊ ಕರುವಾನ ಮತ್ತು ಡೊಮಿನಿಗ್ವೆಜ್‌ ಪೆರೆಜ್‌ ಲೆನಿಯೆರ್‌ ನಡುವಣ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಐತಿಹಾಸಿಕ ಕ್ಷಣ: ಆನಂದ್ ನವದೆಹಲಿ (ಪಿಟಿಐ): ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಭಾರತದ ನಾಲ್ವರು ಸ್ಪರ್ಧಿಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವುದು ‘ಐತಿಹಾಸಿಕ ಕ್ಷಣ’ ಎಂದು ದಿಗ್ಗಜ ಆಟಗಾರ ವಿಶ್ವನಾಥನ್‌ ಆನಂದ್‌ ಶ್ಲಾಘಿಸಿದ್ದಾರೆ. ‘ಭಾರತದ ಚೆಸ್‌ ಕ್ರೀಡೆಯಲ್ಲಿ ಇದು ಐತಿಹಾಸಿಕ ಕ್ಷಣ. ಏಕೆಂದರೆ ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿಯ ಸನಿಹ ತಲುಪಬಲ್ಲ ಹಲವು ಸ್ಪರ್ಧಿಗಳು ನಮ್ಮಲ್ಲಿದ್ದಾರೆ’ ಎಂದು ಚೆಸ್‌ ಡಾಟ್‌ ಕಾಮ್‌ಗೆ ನೀಡಿದ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ‘ಈಗ ನಡೆಯುತ್ತಿರುವ ಫಿಡೆ ವಿಶ್ವಕಪ್‌ನಲ್ಲಿ ಒಬ್ಬರು ಅಥವಾ ಇಬ್ಬರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬಹುದು ಎಂದು ಭಾವಿಸಿದ್ದೆ. ಆದರೆ ನಾಲ್ವರು ಕ್ವಾರ್ಟರ್‌ ಫೈನಲ್‌ ಹಂತ ತಲುಪಿದ್ದಾರೆ. ಆದ್ದರಿಂದ ಭಾರತದ ಚೆಸ್‌ಗೆ ಇದು ಸಂತಸದ ಸಮಯ. ಈ ಸಾಧನೆ ನನಗೂ ಖುಷಿ ನೀಡಿದೆ’ ಎಂದು ಐದು ಬಾರಿಯ ವಿಶ್ವ ಚಾಂಪಿಯನ್‌ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.