ಮಹಾರಾಜ ಟ್ರೋಫಿ: ಮನ್ವಂತ್ ಆಲ್‌ರೌಂಡ್ ಆಟ; ಹುಬ್ಬಳ್ಳಿ ಹ್ಯಾಟ್ರಿಕ್ ಗೆಲುವು ಬೆಂಗಳೂರು: ಆಲ್‌ರೌಂಡರ್‌ ಮನ್ವಂತ್ ಕುಮಾರ್ ಆಟದಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ಪಂದ್ಯದಲ್ಲಿ ಭರ್ಜರಿ ಜಯಸಾಧಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ತಂಡವು 5 ವಿಕೆಟ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯಿಸಿತು. ಮೈಸೂರಿನ ಮನ್ವಂತ್ ಕುಮಾರ್ (15ಕ್ಕೆ4, 28 ರನ್) ಬಲಗೈ ಮಧ್ಯಮವೇಗದ ಬೌಲಿಂಗ್ ಮತ್ತು ಎಡಗೈ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿನ ರೂವಾರಿಯಾದರು. ಟಾಸ್ ಗೆದ್ದ ಹುಬ್ಬಳ್ಳಿ ತಂಡದ ನಾಯಕ ಮನೀಷ್ ಪಾಂಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. 19 ವರ್ಷದ ಮನ್ವಂತ್ ಕುಮಾರ್ ಹಾಗೂ ಪ್ರವೀಣ ದುಬೆ (22ಕ್ಕೆ2) ಅವರ ಬೌಲಿಂಗ್ ಬೆಂಗಳೂರು ತಂಡವು 18.4 ಓವರ್‌ಗಳಲ್ಲಿ 105 ರನ್‌ಗಳ ಸಾಧಾರಣ ಮೊತ್ತಕ್ಕೆ ಎಲ್ಲ ವಿಕೆಟ್ ಕಳೆದುಕೊಂಡಿತು. ನಾಯಕ ಮಯಂಕ್ ಅಗರವಾಲ್ (50; 34ಎ, 4X6, 6X1) ಅರ್ಧಶತಕ ಗಳಿಸಿದ್ದರಿಂದ ನೂರರ ಗಡಿ ದಾಟಲು ಸಾಧ್ಯವಾಯಿತು. ಗುರಿ ಬೆನ್ನಟ್ಟಿದ ತಂಡವು 13.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 111 ರನ್ ಗಳಿಸಿ ಜಯಿಸಿತು. ಸಂಕ್ಷಿಪ್ತ ಸ್ಕೋರು: ಬೆಂಗಳೂರು ಬ್ಲಾಸ್ಟರ್ಸ್: 18.4 ಓವರ್‌ಗಳಲ್ಲಿ 105 (ಮಯಂಕ್ ಅಗರವಾಲ್ 50, ಸೂರಜ್ ಅಹುಜಾ 14, ಮನ್ವಂತ್ ಕುಮಾರ್ ಎಲ್ 15ಕ್ಕೆ4, ಪ್ರವೀಣ ದುಬೆ 22ಕ್ಕೆ2) ಹುಬ್ಬಳ್ಳಿ ಟೈಗರ್ಸ್: 13.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 111 (ಲವನೀತ್ ಸಿಸೊಡಿಯಾ 33, ಮನೀಷ್ ಪಾಂಡೆ ಔಟಾಗದೆ 23, ಮನ್ವಂತ್ ಕುಮಾರ್ 28, ಸರ್ಫರಾಜ್ ಅಶ್ರಫ್ 22ಕ್ಕೆ2) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 5 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಮನ್ವಂತ್ ಕುಮಾರ್ ಎಲ್. ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 198 (ಆರ್.ಸಮರ್ಥ್ 48, ಕರುಣ್ ನಾಯರ್ 57, ಮನೋಜ್ ಬಾಂಢಗೆ ಔಟಾಗದೆ 32, ಶಿವಕುಮಾರ್ ರಕ್ಷಿತ್ 21, ಅಭಿಲಾಷ್ ಶೆಟ್ಟಿ 49ಕ್ಕೆ3, ಡಿ. ಅವಿನಾಶ್ 45ಕ್ಕೆ1, ಅಮಿತ್ ವರ್ಮಾ 24ಕ್ಕೆ1) ಗುಲ್ಬರ್ಗ ಮಿಸ್ಟಿಕ್ಸ್: 19 ಓವರ್‌ಗಳಲ್ಲಿ 144 (ಎಲ್‌.ಆರ್. ಚೇತನ್ 44, ಮಿಚೆಲ್ ಹ್ಯಾಡ್ಲಿ ನರೋನಾ 20, ಮನೋಜ್ ಬಾಂಢಗೆ 19ಕ್ಕೆ4) ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 54 ರನ್‌ ಜಯ. ಪಂದ್ಯಶ್ರೇಷ್ಠ: ಮನೋಜ್ ಬಾಂಢಗೆ. ಗುಲ್ಬರ್ಗ ಮಿಸ್ಟಿಕ್ಸ್–ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 1ರಿಂದ) ಮಂಗಳೂರು ಡ್ರಾಗನ್ಸ್–ಹುಬ್ಬಳ್ಳಿ ಟೈಗರ್ಸ್ (ಸಂಜೆ 5.30ರಿಂದ) ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್ ರಾಯಚೂರು ಹುಡುಗ ಮನೋಜ್ ಬಾಂಢಗೆ (19ಕ್ಕೆ4 ಹಾಗೂ ಅಜೇಯ 32) ಆಲ್‌ರೌಂಡ್ ಆಟದಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೊದಲ ಜಯದ ಸವಿಯುಂಡಿತು. ಟೂರ್ನಿಯ ಮೊದಲೆರಡೂ ಪಂದ್ಯಗಳಲ್ಲ ಸೋತಿದ್ದ ಮೈಸೂರು ತಂಡವು 54 ರನ್‌ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ ಗೆದ್ದಿತು. ಟಾಸ್ ಗೆದ್ದ ಗುಲ್ಬರ್ಗ ತಂಡವು ಫೀಲ್ಟಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌. ಸಮರ್ಥ್ (48; 38ಎ 4X4 6X2) ನಾಯಕ ಕರುಣ್ ನಾಯರ್ (57; 39ಎ 4X5 6X2) ಹಾಗೂ ಮನೋಜ್ ಅವರ ಬ್ಯಾಟಿಂಗ್‌ನಿಂದ ಮೈಸೂರು ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 198 ರನ್‌ ಗಳಿಸಿತು. ಮನೋಜ್ 15 ಎಸೆತಗಳನ್ನು ಆಡಿದರು. ಅದರಲ್ಲ ಇಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಹೊಡೆದರು. ಗುರಿ ಬೆನ್ನಟ್ಟಿದ ಗುಲ್ಬರ್ಗ ತಂಡಕ್ಕೆ ಮನೋಜ್ ತಮ್ಮ ಪರಿಣಾಮಕಾರಿ ದಾಳಿಯಿಂದ ಸೋಲಿನ ಬಿಸಿ ಮುಟ್ಟಿಸಿದರು. ಗುಲ್ಬರ್ಗ ತಂಡದ ಆರಂಭಿಕ ಬ್ಯಾಟರ್ ಎಲ್‌.ಆರ್. ಚೇತನ್ (44; 35ಎ) ಬಿಟ್ಟರೆ ಉಳಿದವರಿಂದ ದೊಡ್ಡ ಮೊತ್ತ ದಾಖಲಾಗಲಿಲ್ಲ. ತಂಡವು 19 ಓವರ್‌ಗಳಲ್ಲಿ 144 ರನ್ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.