ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌- ಜಾವೆಲಿನ್‌ ಪಟು ಜೇನಾ ಸ್ಪರ್ಧೆ ಅನುಮಾನ ನವದೆಹಲಿ: ಭಾರತದ ಜಾವೆಲಿನ್‌ ಥ್ರೊ ಸ್ಪರ್ಧಿ ಕಿಶೋರ್‌ ಕುಮಾರ್‌ ಜೇನಾ ಅವರ ಒಂದು ತಿಂಗಳ ವೀಸಾವನ್ನು ಹಂಗರಿ ಬುಧವಾರ ರದ್ದುಗೊಳಿಸಿದೆ. ಹೀಗಾಗಿ ಅವರು ಆ ದೇಶದ ರಾಜಧಾನಿ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಸಾಧ್ಯತೆ ಕ್ಷೀಣವಾಗಿದೆ. ಕಳೆದ ತಿಂಗಳು ಶ್ರೀಲಂಕಾದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 84.38 ಮೀ. ದೂರಕ್ಕೆ ಜಾವೆಲಿನ್ ಎಸೆದಿದ್ದ ಜೇನಾ, ವಿಶ್ವ ರ‍್ಯಾಂಕಿಂಗ್‌ ಕೋಟಾದಡಿ ಈ ಚಾಂಪಿಯನ್‌ಷಿಪ್‌ಗೆ ಆಯ್ಕೆ ಆಗಿದ್ದರು. ‘ಜಾವೆಲಿನ್‌ ಥ್ರೋವರ್ ಜೇನಾ ಅವರಿಗೆ ಹಿನ್ನಡೆ ಆಗಿದೆ. ದೆಹಲಿಯಲ್ಲಿರುವ ಹಂಗೆರಿಯ ರಾಯಭಾರ ಕಚೇರಿ ಕಾರಣ ತಿಳಿಸದೇ ಅವರ ವೀಸಾ ರದ್ದುಗೊಳಿಸಿದೆ. ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನ’ ಎಂದು ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ಸಾಮಾಜಿಕ ಜಾಲತಾಣ ‘ಎಕ್ಸ್‌’ (ಹಿಂದಿನ ಟ್ವಿಟರ್‌) ನಲ್ಲಿ ತಿಳಿಸಿದೆ. ಕಿಶೋರ್‌ ಕುಮಾರ್‌ ಜೇನಾ ಆಗಸ್ಟ್‌ 20ರಂದು ಬುಡಾಪೆಸ್ಟ್‌ಗೆ ತೆರಳಬೇಕಿತ್ತು. ವೀಸಾ ರದ್ದು ಆದರೆ ಅವರು ಭಾಗವಹಿಸುವಂತಿಲ್ಲ. 25ರಂದು ಜಾವೆಲಿನ್‌ ಅರ್ಹತಾ ಸುತ್ತು ನಿಗದಿಯಾಗಿದ್ದು, 27ರಂದು ಫೈನಲ್ ನಡೆಯಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.