ಬ್ಯಾಸ್ಕೆಟ್‌ಬಾಲ್‌: ಯಂಗ್‌ ಓರಿಯನ್ಸ್‌ಗೆ ಜಯ ಬೆಂಗಳೂರು: ಯಂಗ್‌ ಓರಿಯನ್ಸ್‌ ಸ್ಪೋರ್ಟ್ಸ್ ಕ್ಲಬ್ ತಂಡವು ಪ್ರೊ.ಎನ್‌.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 100–37ರಿಂದ ಎಸ್‌. ಬ್ಲೂಸ್‌ ತಂಡವನ್ನು ಮಣಿಸಿತು. ಮಂಗಳವಾರ ನಡೆದ ಪಂದ್ಯದಲ್ಲಿ ಆರನ್ (28) ಮತ್ತು ಗೌತಮ್‌ (13) ಅವರ ಆಟದ ಬಲದಿಂದ ಯಂಗ್‌ ಓರಿಯನ್ಸ್‌ ತಂಡ 63 ಪಾಯಿಂಟ್‌ಗಳ ಅಂತರದ ಜಯ ಸಾಧಿಸಿತು. ಇತರ ಪಂದ್ಯಗಳಲ್ಲಿ ಬ್ಯಾಂಕ್‌ ಆಫ್‌ ಬರೋಡಾ ತಂಡವು 84–75ರಿಂದ ಮಂಗಳೂರು ಬಿ.ಸಿ ತಂಡವನ್ನು ಸೋಲಿಸಿತು. ಮಧ್ಯಂತರದ ವೇಳೆಗೆ 36–39ರಿಂದ ಹಿನ್ನಡೆಯಲ್ಲಿದ್ದ ಬರೋಡಾ ತಂಡ ನಂತರ ಪುಟಿದೆದ್ದಿತು. ಬರೋಡಾ ತಂಡದ ಅನಿಲ್‌ ಕುಮಾರ್‌ (32), ಅರವಿಂದ್‌ (22) ಮಿಂಚಿದರು. ಮಂಗಳೂರು ತಂಡದ ಅಶ್ವಿಜ್‌ (24) ಗಮನ ಸೆಳೆದರು. ಶಶಿಧರ್‌ (25) ಅವರ ಆಟದ ನೆರವಿನಿಂದ ಡಿವೈಇಎಸ್‌ ಬೆಂಗಳೂರು ತಂಡವು 73–69ರಿಂದ ಐಬಿಬಿಸಿ ತಂಡದ ವಿರುದ್ಧ ಜಯಿಸಿತು. ಮತ್ತೊಂದು ಪಂದ್ಯದಲ್ಲಿ ಮಂಗಳೂರು ಬಿ.ಸಿ ತಂಡವು 73–62ರಿಂದ ಭಾರತ್‌ ಎಸ್‌.ಯು ತಂಡವನ್ನು ಪರಾಭವಗೊಳಿಸಿತು. ಮಂಗಳೂರು ತಂಡದ ರಜತ್‌ (29) ಮಿಂಚಿದರೆ, ಭಾರತ್‌ ತಂಡದ ಅಕ್ಷಯ್‌ (32) ಗಮನ ಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.