ಕ್ರೀಡಾ ಶ್ರೇಷ್ಠತಾ ಕೇಂದ್ರ ಪ್ರವೇಶಕ್ಕೆ ಶಿಫಾರಸು! ಬೆಂಗಳೂರು: ವಿದ್ಯಾನಗರದ ಕ್ರೀಡಾಶಾಲೆ ಆವರಣದಲ್ಲಿರುವ ಖೇಲೊ ಇಂಡಿಯಾದ ರಾಜ್ಯ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ (ಶ್ರೇಷ್ಠತಾ ಕೇಂದ್ರ) ಗುರಿ ಗುಣಮಟ್ಟದ ಅಥ್ಲೀಟುಗಳನ್ನು ರೂಪಿಸುವುದು. ಇಲ್ಲಿ ಪ್ರವೇಶ ಪಡೆಯಲು ಟ್ರಯಲ್ಸ್‌ ಸೇರಿದಂತೆ ಮಾನದಂಡಗಳಿವೆ. ಆದರೆ ಈಗ ಶಿಫಾರಸಿನ ಮೇಲೆ ಆಥ್ಲೀಟುಗಳಿಗೆ ಪ್ರವೇಶ ನೀಡುವ ಪರಿಪಾಟ ಆರಂಭವಾಗಿದೆ. 2022ರಲ್ಲಿ ಆರಂಭವಾದ ಈ ಕೇಂದ್ರದಲ್ಲಿ ಅಥ್ಲೆಟಿಕ್ಸ್‌, ಶೂಟಿಂಗ್‌ ಮತ್ತು ಈಜು ತರಬೇತಿ ನೀಡಲಾಗುತ್ತಿದೆ. 14 ರಿಂದ 23 ವರ್ಷದೊಳಗಿನ ಕ್ರೀಡಾಪಟುಗಳು ಇಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಅಥ್ಲೆಟಿಕ್ಸ್‌ನಲ್ಲಿ ಒಬ್ಬರು ಮತ್ತು ಶೂಟಿಂಗ್‌ನಲ್ಲಿ ಒಬ್ಬರು ಈ ರೀತಿ ಶಿಫಾರಸು ಮೂಲಕ ಈಗಾಗಲೇ ‘ನೇರ ಪ್ರವೇಶ’ ಪಡೆದಿದ್ದಾರೆ. ಮೈಸೂರು ಸಂಸದ ಪ್ರತಾಪ ಸಿಂಹ ಶಿಫಾರಸಿನ ಈ ಇಬ್ಬರು ಪ್ರವೇಶ ಪಡೆದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಸಚಿವ ಚಲುವರಾಯ ಸ್ವಾಮಿ ಅವರೂ ಶಿಫಾರಸು ಪತ್ರ ಕಳಿಸಿದ್ದರು. ಆದರೆ ಈಗ ಆ ಆಥ್ಲೀಟ್‌ಗೆ ಟ್ರಯಲ್ಸ್‌ ನಡೆಸಲು ನಿರ್ಧರಿಸಲಾಗಿದೆ. ಈ ರೀತಿ ನೇರ ಪ್ರವೇಶ ನೀಡುತ್ತಿದ್ದರೆ ಅರ್ಹ ಕ್ರೀಡಾಪಟುಗಳು ಪ್ರತಿಭೆಯಿದ್ದರೂ ಅವಕಾಶ ವಂಚಿತರಾಗುತ್ತಾರೆ. ಟ್ರಯಲ್ಸ್‌ ಅರ್ಥ ಕಳೆದುಕೊಳ್ಳುತ್ತದೆ ಎನ್ನುವ ಕಳವಳ ಹಿರಿಯ ಕ್ರೀಡಾಪಟುಗಳದ್ದು. ಶಿಫಾರಸಿನ ಮೇಲೆ ಪ್ರವೇಶ ನೀಡಿರುವ ಪ್ರಕರಣದ ಬಗ್ಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್‌.ಶಶಿಕುಮಾರ್‌ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಅವರು ಲಭ್ಯರಾಗಲಿಲ್ಲ. ಸರಿಯಲ್ಲ: ‘ಕ್ರೀಡೆಯಲ್ಲಿ ಈ ರೀತಿ ಮಾಡಲೇಬಾರದು. ಅರ್ಹತೆ ಇರುವವರಿಗೆ ಅವಕಾಶ ನೀಡಬೇಕು. ಇಂಥದ್ದು ನಡೆದರೆ ಕ್ರೀಡೆಯಲ್ಲಿ ಆಸಕ್ತಿಯಿರುವ ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಲು ಪೋಷಕರು ಮುಂದೆ ಬರುವುದಿಲ್ಲ’ ಎಂದು ಹಿರಿಯ ಅಥ್ಲೀಟ್‌ ಅಶ್ವಿನಿ ನಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ರೀತಿ ಶಿಫಾರಸಿನ ಮೇಲೆ ಪ್ರವೇಶ ನೀಡಿದರೆ ಅರ್ಹ ಪ್ರತಿಭಾನ್ವಿತ ಮಕ್ಕಳಿಗೆ ಅನ್ಯಾಯವಾಗುತ್ತದೆ. ಇದು ಸರಿಯಾದ ಕ್ರಮವೇ ಅಲ್ಲ’ ಎಂದು ದ.ಕ. ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಅಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು. ಅವರು ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಉಪಾಧ್ಯಕ್ಷರಾಗಿದ್ದಾರೆ. ನಿರ್ಮಾಣ ಹಂತದಲ್ಲಿ 50 ಮೀ. ಈಜು ಕೊಳ ವಿದ್ಯಾನಗರದ ಕ್ರೀಡಾಶಾಲೆಯ ಆವರಣದಲ್ಲಿ ಉತ್ತಮವಾಗಿ ನಿರ್ವಹಣೆಯಾಗುತ್ತಿರುವ 25 ಮೀ. ಈಜುಕೊಳ ಇದೆ. ಆದರೆ 50 ಮೀ. ಈಜುಕೊಳದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದು ಏಪ್ರಿಲ್‌ನಲ್ಲೇ ಪೂರ್ಣಗೊಳ್ಳಬೇಕಿತ್ತು. ಶೂಟಿಂಗ್‌ ಅರೇನಾ ಕೆಲಸವೂ ನಡೆಯುತ್ತಿದೆ. ಇಲ್ಲಿ ಕೆಲಕಾಲ ಕೆಲಸ ಮಾಡಿದ್ದ ಹೆಸರಾಂತ ಶೂಟಿಂಗ್‌ ಕೋಚ್‌, ಒಲಿಂಪಿಯನ್‌ ಪ್ರಕಾಶ್‌ ನಂಜಪ್ಪ ಎರಡು ತಿಂಗಳ ಹಿಂದೆ ಭೋಪಾಲ್‌ನ ಕೇಂದ್ರಕ್ಕೆ ತೆರಳಿದ್ದಾರೆ. ಪೌಷ್ಟಿಕಾಂಶ ತಜ್ಞರ ಹುದ್ದೆಯೂ ಖಾಲಿಯಿದೆ. ಶೂಟಿಂಗ್‌ ತರಬೇತಿಯಲ್ಲಿರುವ 13 ಮಂದಿ ಅಭ್ಯಾಸ ನಡೆಸಲು ಕೆಂಗೇರಿಯ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರಕ್ಕೆ ತೆರಳಿ ಅಲ್ಲಿನ ಸೌಲಭ್ಯ ಬಳಸಬೇಕಾಗಿದೆ. ಇನ್ನು ಸಿಂಥೆಟಿಕ್‌ ಟ್ರ್ಯಾಕ್‌ ಬಳಿಯಿರುವ ಹ್ಯಾಮರ್‌ ಕೇಜ್‌ ತಿಂಗಳ ಹಿಂದೆಯೇ ಮುರಿದುಬಿದ್ದಿದೆ. ಈಜಿನಲ್ಲಿ ನಾಲ್ಕು ಮಂದಿ, ಅಥ್ಲೆಟಿಕ್ಸ್‌ನಲ್ಲಿ 25 ಮಂದಿ ಸದ್ಯ ತರಬೇತಿಯಲ್ಲಿದ್ದಾರೆ. ಉಳಿದಂತೆ ಉಳಿದುಕೊಳ್ಳಲು ಸುಸಜ್ಜಿತ ಹಾಸ್ಟೆಲ್‌ ವ್ಯವಸ್ಥೆ, ಜಿಮ್‌, ಸ್ಪಾ, ಯೋಗ ಕೇಂದ್ರ, ಸಿಂಥೆಟಿಕ್‌ ಟ್ರ್ಯಾಕ್‌ ಎಲ್ಲವೂ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.