ವಿಶ್ವಕಪ್‌ ಆರ್ಚರಿ ಸ್ಟೇಜ್‌–4: ಭಾರತಕ್ಕೆ ಎರಡು ಚಿನ್ನ ಪ್ಯಾರಿಸ್‌ : ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಆರ್ಚರಿ ಸ್ಟೇಜ್‌–4ರ ಕಾಂಪೌಂಡ್‌ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡವು. ಶನಿವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್‌ ವರ್ಮಾ, ಓಜಸ್‌ ದೇವತಾಳೆ ಮತ್ತು ಪ್ರಥಮೇಶ್‌ ಜಾವಕರ್ ಅವರನ್ನೊಳಗೊಂಡ ಭಾರತ, 236– 232 ರಿಂದ ಅಮೆರಿಕ ತಂಡವನ್ನು ಮಣಿಸಿತು. ನಾಲ್ಕನೇ ಶ್ರೇಯಾಂಕ ಹೊಂದಿದ್ದ ಭಾರತದ ಸ್ಪರ್ಧಿಗಳು ನಿಖರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಎರಡನೇ ಶ್ರೇಯಾಂಕದ ಅಮೆರಿಕ ತಂಡವನ್ನು ಕ್ರಿಸ್‌ ಶಾಫ್, ಜೇಮ್ಸ್‌ ಲುಟ್ಜ್‌ ಮತ್ತು ಸಾಯೆರ್‌ ಸುಲಿವನ್‌ ಅವರು ಪ್ರತಿನಿಧಿಸಿದ್ದರು. ಎರಡನೇ ಸುತ್ತಿನ ಕೊನೆಯಲ್ಲಿ ಉಭಯ ತಂಡಗಳು 118–118 ರಿಂದ ಸಮಬಲ ಸಾಧಿಸಿದ್ದವು. ಅಭಿಷೇಕ್‌, ಓಜಸ್‌ ಮತ್ತು ಪ್ರಥಮೇಶ್‌ ಅವರು ಕೊನೆಯ ಎರಡು ಸುತ್ತುಗಳಲ್ಲಿ ಒತ್ತಡವನ್ನು ಮೆಟ್ಟಿನಿಂತು ನಾಲ್ಕು ಪಾಯಿಂಟ್‌ಗಳ ಗೆಲುವು ತಂದುಕೊಟ್ಟರು. ಭಾರತ ತಂಡ ಸೆಮಿಫೈನಲ್‌ನಲ್ಲಿ ಕೊರಿಯಾ ತಂಡವನ್ನು ಸೋಲಿಸಿತ್ತು. ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಮತ್ತು ಪ್ರಣೀತ್‌ ಕೌರ್‌ ಅವರನ್ನೊಳಗೊಂಡ ಭಾರತ ಮಹಿಳಾ ತಂಡ, ಫೈನಲ್‌ನಲ್ಲಿ 234–233 ರಿಂದ ಮೆಕ್ಸಿಕೊ ವಿರುದ್ಧ ಗೆದ್ದಿತು. ಅರ್ಹತಾ ಹಂತದಲ್ಲಿ ಅಗ್ರಸ್ಥಾನ ಪಡೆದು ಫೈನಲ್‌ಗೇರಿದ್ದ ಭಾರತ, ಮೊದಲಾರ್ಧ ಕೊನೆಗೊಂಡಾಗ 118–117 ರಿಂದ ಮುನ್ನಡೆಯಲ್ಲಿತ್ತು. ಆದರೆ ಮೂರನೇ ಸುತ್ತಿನ ಬಳಿಕ ಮೆಕ್ಸಿಕೊ 176–175 ರಿಂದ ಮೇಲುಗೈ ಸಾಧಿಸಿತು. ಕೊನೆಯ ಸುತ್ತಿನಲ್ಲಿ ಗುರಿ ಹಿಡಿಯುವಲ್ಲಿ ನಿಖರತೆ ಸಾಧಿಸಿದ ಭಾರತ, ಒಂದು ಪಾಯಿಂಟ್ಸ್‌ನಿಂದ ಗೆದ್ದಿತು. ಮಹಿಳಾ ತಂಡದವರು ಈ ತಿಂಗಳ ಆರಂಭದಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲೂ ಚಿನ್ನ ಗೆದ್ದುಕೊಂಡಿದ್ದರು. ಭಾರತದ ಪುರುಷ ಮತ್ತು ಮಹಿಳೆಯರ ರಿಕರ್ವ್‌ ತಂಡಗಳು ಕಂಚಿನ ಪದಕ ಗೆದ್ದುಕೊಂಡವು. ಧೀರಜ್‌ ಬೊಮ್ಮದೇವರ, ಅತಾನು ದಾಸ್‌ ಹಾಗೂ ತುಷಾರ್‌ ಪ್ರಭಾಕರ್‌ ಅವರನ್ನೊಳಗೊಂಡ ಪುರುಷರ ತಂಡ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ಪೇನ್‌ ತಂಡವನ್ನು ಪರಾಭವಗೊಳಿಸಿತು. ಭಜನ್‌ ಕೌರ್, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜೀತ್‌ ಕೌರ್‌ ಅವರಿದ್ದ ಮಹಿಳಾ ತಂಡ ಮೆಕ್ಸಿಕೊ ವಿರುದ್ಧ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.