ಬ್ಯಾಸ್ಕೆಟ್‌ಬಾಲ್‌: ಐಬಿಬಿಸಿ ತಂಡಕ್ಕೆ ಗೆಲುವು ಬೆಂಗಳೂರು: ಯಶವಂತ್‌ ಮತ್ತು ಸುರೇಶ್‌ ಅವರ ಆಟದ ಬಲದಿಂದ ಐಬಿಬಿಸಿ ತಂಡವು ಪ್ರೊ.ಎನ್‌.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 77–76 ರಿಂದ ಬಿಎಸ್‌ಎನ್‌ಎಲ್‌ ತಂಡವನ್ನು ಮಣಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಐಬಿಬಿಸಿ ತಂಡವು 1 ಪಾಯಿಂಟ್‌ ಅಂತರದಿಂದ ಜಯ ಸಾಧಿಸಿತು. ಆ ತಂಡದ ಯಶವಂತ್‌ (38), ಸುರೇಶ್‌ (19) ಮಿಂಚಿದರು. ಬಿಎಸ್‌ಎನ್‌ಎಲ್‌ ತಂಡದ ಸೂರಜ್‌ (23), ಭುವನ್‌ರಾಜ್‌ (16) ಗಮನ ಸೆಳೆದರು. ಮತ್ತೊಂದು ಪಂದ್ಯದಲ್ಲಿ ಎಸ್‌. ಬ್ಲೂಸ್‌ ತಂಡವು 79–76 ರಿಂದ ಭಾರತ್‌ ಎಸ್‌.ಯು ತಂಡವನ್ನು ಸೋಲಿಸಿತು. ಎಸ್‌. ಬ್ಲೂಸ್‌ ಪರ ರಂಗ (24), ಬೆಂಜಮಿನ್‌ (18) ಉತ್ತಮ ಆಟವಾಡಿದರು. ಮೊದಲಾರ್ಧದ ವೇಳೆಗೆ 27–38 ರಿಂದ ಹಿನ್ನಡೆಯಲ್ಲಿದ್ದ ಬ್ಲೂಸ್‌ ತಂಡ ನಂತರ ಪುಟಿದೆದ್ದು, ಮೇಲುಗೈ ಸಾಧಿಸಿತು. ಇತರ ಪಂದ್ಯಗಳಲ್ಲಿ ಡಿವೈಇಎಸ್‌ ಬೆಂಗಳೂರು ತಂಡವು ಮನೋಜ್‌ (30), ರಕ್ಷಿತ್‌ (19) ಅವರ ಆಟದ ನೆರವಿನಿಂದ 72–68ರಿಂದ ಬೀಗಲ್ಸ್‌ ಬಿ.ಸಿ ತಂಡವನ್ನು ಪರಾಭವಗೊಳಿಸಿತು. ಮಧ್ಯಂತರದ ವೇಳೆಗೆ 33–40 ರಿಂದ ಮುನ್ನಡೆಯಲ್ಲಿದ್ದ ಬೀಗಲ್ಸ್‌ ತಂಡ, ನಂತರ ಹಿನ್ನಡೆ ಅನುಭವಿಸಿತು. ‌‌ ಯಂಗ್‌ ಓರಿಯನ್ಸ್‌ ಎಸ್‌.ಸಿ ತಂಡವು 104–57 ರಿಂದ ಜಿಎಸ್‌ಟಿ ಅಂಡ್‌ ಕಸ್ಟಮ್ಸ್‌ ತಂಡವನ್ನು ಮಣಿಸಿತು. ಓರಿಯನ್ಸ್‌ನ ಸುಮಂತ್‌ (25), ಅರ್ಜುನ್‌ (22) ಮತ್ತು ಆರನ್‌ (14) ಗಮನ ಸೆಳೆದರು. ಬ್ಯಾಂಕ್‌ ಆಫ್‌ ಬರೋಡಾ ತಂಡವು 84–52 ರಿಂದ ಎಂಎನ್‌ಕೆ ರಾವ್‌ ಪಾರ್ಕ್‌ ತಂಡವನ್ನು ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.